ಮೈಸೂರು:ಜಮೀನಿಗೆ ನೀರು ಹಾಯಿಸಲು ಹೋಗಿದ್ದ ರೈತನ ಮೇಲೆ ಕಾಡಾನೆ ದಾಳಿ ಮಾಡಿದ್ದು, ಗಂಭೀರವಾಗಿ ಗಾಯಗೊಳಿಸಿದೆ. ಹೆಚ್.ಡಿ.ಕೋಟೆ ತಾಲೂಕಿನ ಹಳೆ ಹೆಗ್ಗುಡಿಲು ಗ್ರಾಮದಲ್ಲಿ ಶನಿವಾರ ಸಂಜೆ ಘಟನೆ ನಡೆದಿದೆ. ಗ್ರಾಮದ ರೈತ ದಂಡನಾಯಕ ಗಾಯಗೊಂಡವರು.
ಜಮೀನಿಗೆ ನೀರು ಹಾಯಿಸಲು ಹೋದಾಗ ಆನೆ ದಾಳಿ ಮಾಡಿದೆ. ಗಂಭೀರವಾಗಿ ಗಾಯಗೊಂಡಿದ್ದ ರೈತನನ್ನು ತಕ್ಷಣ ಹೆಚ್.ಡಿ.ಕೋಟೆ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ, ಪ್ರಾಥಮಿಕ ಚಿಕಿತ್ಸೆ ಕೊಡಿಸಲಾಗಿದೆ. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಕೊಲಂಬಿಯಾ ಆಸ್ಪತ್ರೆಗೆ ಸೇರಿಸಲಾಗಿದೆ.
ಅರಣ್ಯ ಇಲಾಖೆ ವಿರುದ್ಧ ಆಕ್ರೋಶ:"ದಾಳಿ ಮಾಡಿದ ಆನೆ ಹಳೆ ಹೆಗ್ಗುಡಿಲು ಗ್ರಾಮದ ಸುತ್ತಮುತ್ತ ಇದೆ. ಈವರೆಗೂ ಅರಣ್ಯ ಇಲಾಖೆಯ ಸಿಬ್ಬಂದಿ ಬಂದು ಸ್ಥಳ ಮಹಜರು ಅಥವಾ ಆನೆ ಓಡಿಸುವ ಕಾರ್ಯ ಮಾಡಿಲ್ಲ. ಆನೆಗಳ ನಿರಂತರ ಉಪಟಳದಿಂದ ಗ್ರಾಮದಲ್ಲಿ ಭಾರಿ ಪ್ರಮಾಣದ ಬೆಳೆ ನಾಶವಾಗುತ್ತಿತ್ತು. ಆದರೆ ಈಗ ಜನರ ಮೇಲೆ ದಾಳಿ ನಡೆಯುತ್ತಿದೆ" ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು. ಗ್ರಾಮದ ಜಮೀನುಗಳಲ್ಲಿ ಆನೆಗಳು ಆಗಾಗ ಕಾಣಿಸಿಕೊಳ್ಳುತ್ತಿವೆ. ಆದರೆ ಅರಣ್ಯ ಇಲಾಖೆ ಅಧಿಕಾರಿಗಳು ಪರ್ಯಾಯ ವ್ಯವಸ್ಥೆ ಮಾಡದೆ ಮೌನವಾಗಿದ್ದರೆ ಎಂದು ಅವರು ದೂರಿದ್ದಾರೆ.
ಇತ್ತೀಚಿನ ಪ್ರಕರಣಗಳು:
- ಕಾರ್ಮಿಕನ ಮೇಲೆ ಕಾಡಾನೆ ದಾಳಿ:ಇತ್ತೀಚೆಗೆ ಕೊಡಗು ಜಿಲ್ಲೆಯ ಕಂಬಿಬಣೆ ಗ್ರಾಮದ ಕಾಫಿ ತೋಟದಲ್ಲಿ ಕೆಲಸ ಮಾಡಿ ಬರುತ್ತಿದ್ದಾಗ ವಯೋವೃದ್ಧ ಕಾರ್ಮಿಕನ ಮೇಲೆ ಕಾಡಾನೆಯೊಂದು ದಾಳಿ ಮಾಡಿ ಘಾಸಿಗೊಳಿಸಿತ್ತು. ಭೂತನಕಾಡು ಟಾಟಾ ಕಾಫಿ ತೋಟದ ಲೈನ್ ಮನೆಯಲ್ಲಿ ವಾಸವಾಗಿರುವ ರಾಮಸ್ವಾಮಿ ಎಂಬವರು ವೃಂದಾವನ ತೋಟದಲ್ಲಿ ಕೆಲಸ ಮುಗಿಸಿ ರಸ್ತೆಯಲ್ಲಿ ನಡೆದುಕೊಂಡು ಬರುತ್ತಿದ್ದಾಗ ದಿಢೀರ್ ಕಾಡಾನೆ ಪ್ರತ್ಯಕ್ಷವಾಗಿತ್ತು. ರಾಮಸ್ವಾಮಿ ಮೇಲೆರಗಿ ನೆಲಕ್ಕೆ ಬೀಳಿಸಿ ಕಾಲನ್ನು ತುಳಿಯಲಾರಂಭಿಸಿತ್ತು. ಅದೃಷ್ಟವಾಶಾತ್ ಅವರ ಹಿಂದೆ ಬರುತ್ತಿದ್ದ ತೋಟದ ರೈಟರ್ ಆನೆಯನ್ನು ಕಂಡು ಜೋರಾಗಿ ಬೊಬ್ಬಿಟ್ಟಿದ್ದರು. ಅವರ ಕಿರುಚಾಟಕ್ಕೆ ಕಾಡಾನೆ ರಾಮಸ್ವಾಮಿಯನ್ನು ಬಿಟ್ಟು ಅಲ್ಲಿಂದ ಓಡಿ ಹೋಗಿತ್ತು.
ಇದನ್ನೂ ಓದಿ:Elephant attack: ಕೊಡಗುದಲ್ಲಿ ವಯೋವೃದ್ಧ ಕಾರ್ಮಿಕನ ಮೇಲೆ ಕಾಡಾನೆ ದಾಳಿ.. ತೋಟದ ರೈಟರ್ನಿಂದ ಉಳಿಯಿತು ಪ್ರಾಣ
- ಆನೆ ದಾಳಿ; ತಂದೆ ಬಲಿ, ಮಗ ಪಾರು:ಕಾಡಾನೆ ದಾಳಿಯಿಂದ ವ್ಯಕ್ತಿಯೋರ್ವ ಮೃತಪಟ್ಟಿರುವ ಘಟನೆ ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಪಿ.ಜಿ.ಪಾಳ್ಯ ಸಮೀಪ ಆಲದಕೆರೆ ಕಾಡಿನಲ್ಲಿ ಇತ್ತೀಚೆಗೆ ಸಂಜೆಯ ವೇಳೆ ನಡೆದಿತ್ತು. ಪಿ.ಜಿ.ಪಾಳ್ಯ ಸಮೀಪದ ಮಾಳಿಗನತ್ತ ಗ್ರಾಮದ ಪ್ರಭುಸ್ವಾಮಿ (55) ಮೃತರು. ಮಲೆಮಹದೇಶ್ವರ ವನ್ಯಜೀವಿಧಾಮ ಪಿ.ಜಿ.ಪಾಳ್ಯ ಅರಣ್ಯ ವಲಯಕ್ಕೆ ಸೇರಿದ ಆಲದಕೆರೆ ಬಯಲು ಅರಣ್ಯ ಪ್ರದೇಶಕ್ಕೆ ಪ್ರಭುಸ್ವಾಮಿ ಹಾಗೂ ಮಗ ಚಂದ್ರು ಇಬ್ಬರೂ ಪೊರಕೆ ಕಡ್ಡಿ ಕೀಳಲು ತೆರಳಿದ್ದರು. ಅಪ್ಪ ಒಂದು ಭಾಗದಲ್ಲಿ ಮಗ ಮತ್ತೊಂದು ಭಾಗದಲ್ಲಿ ಕಡ್ಡಿ ಕೀಳುತ್ತಿದ್ದಾಗ ಆನೆ ದಾಳಿ ಮಾಡಿತ್ತು. ಪ್ರಭುಸ್ವಾಮಿ ಸ್ಥಳದಲ್ಲೇ ಅಸುನೀಗಿದ್ದರು. ಪ್ರಾಣಾಪಾಯದಿಂದ ಪಾರಾದ ಮಗನಿಂದ ಘಟನೆ ಬೆಳಕಿಗೆ ಬಂದಿತ್ತು.
ಇದನ್ನೂ ಓದಿ:ಚಾಮರಾಜನಗರ: ಪೊರಕೆ ಕಡ್ಡಿ ಕೀಳಲು ಹೋದಾಗ ಆನೆ ದಾಳಿ; ತಂದೆ ಬಲಿ, ಮಗ ಪಾರು