ಮೈಸೂರು:ಜಮೀನು ವಿವಾದದ ಹಿನ್ನೆಲೆಯಲ್ಲಿ ಮರಕ್ಕೆ ಕಟ್ಟಿಹಾಕಿ ಥಳಿಸಿದ್ದರಿಂದ ಅವಮಾನಿತರಾಗಿ, ರೈತನೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹುಣಸೂರು ತಾಲೂಕಿನ ಕುಡಿನೀರು ಮುದ್ದನಹಳ್ಳಿಯಲ್ಲಿ ನಡೆದಿದೆ. ಈ ಸಂಬಂಧ ಮೃತರ ಪತ್ನಿ ನೀಡಿದ ದೂರಿನಂತೆ ಮೂವರ ವಿರುದ್ಧ ಹುಣಸೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹುಣಸೂರು ತಾಲೂಕಿನ ಕುಡಿನೀರು ಮುದ್ದನಹಳ್ಳಿ ಗ್ರಾಮದ ಗುರುರಾವ್ ಭಾಂಗೆ (60) ಆತ್ಮಹತ್ಯೆಗೆ ಶರಣಾದವರು. ಇವರಿಗೆ ಪತ್ನಿ, ಮಕ್ಕಳಿದ್ದಾರೆ. ಪತಿಯ ಆತ್ಮಹತ್ಯೆಗೆ ಗ್ರಾಮದ ಮಹೇಶ್ ಮತ್ತವರ ಪತ್ನಿ ಸಾಕಮ್ಮ ಹಾಗೂ ಇವರ ಪುತ್ರ ರಂಜನ್ ಅವರ ಕಿರುಕುಳವೇ ಕಾರಣ ಎಂದು ಆರೋಪಿಸಿ ಗುರುರಾವ್ ಪತ್ನಿ ಮಂಜುಳಾ ಬಾಯಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಜಮೀನು ವಿವಾದ:ತರೀಕಲ್ ಗ್ರಾಮದಲ್ಲಿ ರೈತ ಗುರುರಾವ್ ಬಾಂಗೆಗೆ 2.05 ಎಕರೆ ಜಮೀನಿದೆ. ಆದರೆ, ಪಕ್ಕದ ಜಮೀನಿನ ಮಹೇಶ್ ಮತ್ತು ಕುಟುಂಬದವರು ಗುರುರಾವ್ ಬಾಂಗೆ ಜಮೀನಿನಲ್ಲಿ 16 ಗುಂಟೆ ಜಾಗವು ತಮ್ಮ ಕುಟುಂಬಕ್ಕೆ ಸೇರಬೇಕು ಎಂದು ಹಿಂದಿನಿಂದಲೂ ಆಗಾಗ್ಗೆ ಗಲಾಟೆ ಮಾಡುತ್ತಿದ್ದರು. ಕಳೆದ ಎರಡು ವರ್ಷಗಳ ಹಿಂದೆ ಜಮೀನು ವಿವಾದ ನ್ಯಾಯಾಲಯದ ಮೆಟ್ಟಿಲೇರಿತ್ತು.
ಪೊಲೀಸರ ಎಚ್ಚರಿಕೆ:ಮೊನ್ನೆ ಶುಕ್ರವಾರವೂ ಸಹ ಮಹೇಶ್ ಮತ್ತು ಗುರುರಾವ್ ಬಾಂಗೆ ನಡುವೆ ಗಲಾಟೆಯಾಗಿತ್ತು. ಈ ಸಂಬಂಧ ಗ್ರಾಮಾಂತರ ಠಾಣೆ ಪೊಲೀಸರು ಇಬ್ಬರನ್ನೂ ಕರೆಸಿ ಜಮೀನು ವಿವಾದ ನ್ಯಾಯಾಲಯದಲ್ಲಿದ್ದು, ಆದೇಶ ಹೊರಬೀಳುವವರೆಗೆ ಇಬ್ಬರೂ ಕೂಡ ಗಲಾಟೆ ಮಾಡಿಕೊಳ್ಳದಂತೆ ಎಚ್ಚರಿಕೆ ನೀಡಿ ಕಳುಹಿಸಿದ್ದರು.
ಅವಮಾನ ತಾಳಲಾರದೆ ಆತ್ಮಹತ್ಯೆ ಆರೋಪ:ಈ ನಡುವೆ ಶುಕ್ರವಾರ ಸಂಜೆ ಮತ್ತೊಮ್ಮೆ ಗಲಾಟೆ ನಡೆದಿದ್ದು, ಮಹೇಶ್ ಮತ್ತವರ ಪತ್ನಿ ಸಾಕಮ್ಮ ಹಾಗೂ ಪುತ್ರ ರಂಜನ್ ಸೇರಿಕೊಂಡು ಗುರುರಾವ್ ಭಾಂಗೆ ಅವರಿಗೆ ಕುಡಿನೀರು ಮುದ್ದನಹಳ್ಳಿ ಗ್ರಾಮದ ಸರ್ಕಲ್‌ನಲ್ಲಿ ಮನಬಂದಂತೆ ಥಳಿಸಿ ಅಪಮಾನ ಮಾಡಿದ್ದಾರೆ. ಇದರಿಂದ ಮನನೊಂದ ಗುರುರಾವ್ ಭಾಂಗೆ ಶನಿವಾರ ಮುಂಜಾನೆ ತಮ್ಮ ಜಮೀನಿನಲ್ಲೇ ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಬಳಿಕ ಅಸ್ವಸ್ಥಗೊಂಡ ಗುರುರಾವ್ರನ್ನು ಹುಣಸೂರು ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಚಿಕಿತ್ಸೆಗೆ ಸ್ಪಂದಿಸದೇ ಸಾವನ್ನಪ್ಪಿದ್ದಾರೆ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಲಾಗಿದೆ.
ತಮ್ಮ ಪತಿಯ ಸಾವಿಗೆ ಮಹೇಶ್, ಆತನ ಪತ್ನಿ ಸಾಕಮ್ಮ ಹಾಗೂ ಪುತ್ರ ರಂಜನ್ ಅವರೇ ಕಾರಣ ಎಂದು ಗುರುರಾವ್ ಭಾಂಗೆ ಪತ್ನಿ ಮಂಜುಳಾ ಬಾಯಿ ಹುಣಸೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸುತ್ತಿದ್ದು, ಪರಾರಿಯಾದ ಆರೋಪಿಗಳಿಗಾಗಿ ಬಲೆ ಬೀಸಿದ್ದಾರೆ.
ಮೈಸೂರು ಎಸ್ಪಿ ಪ್ರತಿಕ್ರಿಯೆ:ಪ್ರಕರಣ ಸಂಬಂಧ ಈಟಿವಿ ಭಾರತದ ಜೊತೆ ದೂರವಾಣಿ ಮೂಲಕ ಪ್ರತಿಕ್ರಿಯಿಸಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೀಮಾ ಲಾಟ್ಕರ್, ''ರೈತನ ಆತ್ಮಹತ್ಯೆ ಸಂಬಂಧ ಪತ್ನಿ ನೀಡಿದ ದೂರಿನಡಿ ಹುಣಸೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ತನಿಖೆ ಕೈಗೊಂಡಿದ್ದು, ಆರೋಪಿಗಳ ಬಂಧಿಸುವತ್ತ ಕ್ರಮ ಕೈಗೊಳ್ಳಲಾಗಿದೆ''ಎಂದು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ:ನಕಲಿ ದಾಖಲೆ ಸೃಷ್ಟಿಸಿ ಜಮೀನು ಮಾರಾಟ: ಆರೋಪಿಗಳಿಗೆ 3 ವರ್ಷ ಜೈಲು, ದಂಡ ವಿಧಿಸಿದ ನ್ಯಾಯಾಲಯ