ಮೈಸೂರು :ನಕಲಿ ನಂದಿನಿ ತುಪ್ಪ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರನ್ನು ಬಂಧಿಸಲಾಗಿದೆ ಎಂದು ಜಿಲ್ಲಾ ವರಿಷ್ಠಾಧಿಕಾರಿ ಆರ್.ಚೇತನ್ ತಿಳಿಸಿದರು.
ನಗರದಲ್ಲಿ ಜಿಲ್ಲಾ ವರಿಷ್ಠಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಚಾಮುಂಡಿಬೆಟ್ಟದ ತಪ್ಪಲಿನಲ್ಲಿರುವ ಹೊಸಹುಂಡಿ ಗ್ರಾಮದಲ್ಲಿ ನಕಲಿ ನಂದಿನಿ ತುಪ್ಪ ಘಟಕ ಪತ್ತೆಯಾದ ಹಿನ್ನೆಲೆಯಲ್ಲಿ ಪ್ರಕರಣ ಸಂಬಂಧ ಡಿವೈಎಸ್ಪಿ ಸುಮಿತ್ ನೇತೃತ್ವದಲ್ಲಿ ತನಿಖೆ ಕೈಗೊಳ್ಳಲಾಗಿತ್ತು. ಈ ಸಂಬಂಧ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ.
ನಕಲಿ ತುಪ್ಪ ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಲ್ಲಾ ವರಿಷ್ಠಾಧಿಕಾರಿ ಆರ್.ಚೇತನ್ ಮಾಹಿತಿ ನೀಡಿರುವುದು.. ನಾಲ್ವರು ಆರೋಪಿಗಳ ಪೈಕಿ ಇಬ್ಬರ ಹೆಸರು ಎಫ್‌ಐಆರ್‌ನಲ್ಲಿ ಉಲ್ಲೇಖವಾಗಿತ್ತು. ತನಿಖೆ ಮುಂದುವರೆದಿದ್ದು, ಆರೋಪಿಗಳು ನೀಡುವ ಸುಳಿವಿನ ಮೇರೆಗೆ ಮುಂದಿನ ಕ್ರಮಕೈಗೊಳ್ಳಲಾಗುವುದು ಎಂದರು.
ಪ್ರಕರಣ ಸಂಬಂಧ ಮತ್ತಷ್ಟು ಆರೋಪಿಗಳನ್ನು ಬಂಧಿಸುವ ಸಾಧ್ಯತೆ ಇದೆ. ಆರೋಪಿಗಳು ಬಹಳ ವರ್ಷಗಳಿಂದ ಮೈಸೂರಿನಲ್ಲೇ ನೆಲೆಸಿದ್ದರೆಂಬ ಬಗ್ಗೆ ಮಾಹಿತಿ ಲಭ್ಯವಾಗಿದೆ.
ಈವರೆಗಿನ ತನಿಖೆ ಪ್ರಕಾರ ಕೆಎಂಎಫ್‌ನ ಸಿಬ್ಬಂದಿ ಪ್ರಕರಣದಲ್ಲಿ ಭಾಗಿಯಾಗಿರುವ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ. ಹಾಗಂತಾ, ಈಗಲೇ ನಿರ್ಧಾರ ಕೈಗೊಳ್ಳಲಾಗುವುದಿಲ್ಲ ಎಂದರು.
ದಾಳಿ ವೇಳೆ 10 ಟನ್ ನಕಲಿ ನಂದಿನಿ ತುಪ್ಪ ಪತ್ತೆಯಾಗಿದೆ. ಇದರ ಬಗ್ಗೆ ಸಮಗ್ರವಾದ ತನಿಖೆ ನಡೆಯುತ್ತಿದೆ. ನಕಲಿ ನಂದಿನಿ ತುಪ್ಪ ಘಟಕ ಸ್ಥಾಪನೆ ಮಾಡಲು ಬಿಲ್ಡಿಂಗ್ ನೀಡಿದ ಮಾಲೀಕರಿಂದ ಮಾಹಿತಿಯನ್ನು ಪಡೆಯುತ್ತಿದ್ದೀವಿ. ಅವರು ತಪ್ಪಿತಸ್ಥರೆಂದು ಕಂಡು ಬಂದಲ್ಲಿ ಅವರನ್ನು ಬಂಧಿಸುತ್ತೀವಿ ಎಂದು ತಿಳಿಸಿದರು.