ಮೈಸೂರು : ಸಿದ್ದರಾಮಯ್ಯ ಮತ್ತೆ ವರುಣಾದಿಂದ ಸ್ಪರ್ಧೆ ಮಾಡಿರುವ ಹಿನ್ನೆಲೆ ಮತ್ತು ಬಿಜೆಪಿಯಿಂದ ವಿ ಸೋಮಣ್ಣ ಸ್ಪರ್ಧಿಸುವುದರಿಂದ ಈಗ ವರುಣಾ ಕ್ಷೇತ್ರ ಹೈ ವೋಲ್ಟೆಜ್ ಕದನವಾಗಿ ರಾಜ್ಯದ ಗಮನ ಸೆಳೆಯುತ್ತಿದೆ. ಸಿದ್ದು ಭದ್ರಕೋಟೆಯಲ್ಲಿ ಸೋಮಣ್ಣ ಹೋರಾಟ ನಡೆಸುತ್ತಿದ್ದಾರೆ.
2008ರಲ್ಲಿ ಮೈಸೂರು, ನಂಜನಗೂಡು ಹಾಗೂ ಟಿ ನರಸೀಪುರ ತಾಲೂಕಿನ ಕೆಲವು ಗ್ರಾಮಗಳನ್ನು ಒಳಗೊಂಡು ಅಸ್ತಿತ್ವಕ್ಕೆ ಬಂದ ನೂತನ ಕ್ಷೇತ್ರವೇ ವರುಣಾ ವಿಧಾನಸಭಾ ಕ್ಷೇತ್ರ. ಈ ಕ್ಷೇತ್ರದ ವ್ಯಾಪ್ತಿಯಲ್ಲಿ ಪ್ರಸಿದ್ಧ ಸುತ್ತೂರು ಮಠ ಹಾಗೂ ಕಪಿಲಾ ನದಿ ಹರಿದು ಹೋಗುತ್ತದೆ. ಕೃಷಿ ಪ್ರಧಾನ ಆಗಿರುವ ಈ ಕ್ಷೇತ್ರವನ್ನು ಕಳೆದ 15 ವರ್ಷಗಳಿಂದ ಸಿದ್ದರಾಮಯ್ಯ ಹಾಗೂ ಅವರ ಮಗ ಯತೀಂದ್ರ ಸಿದ್ದರಾಮಯ್ಯ ಪ್ರತಿನಿಧಿಸುತ್ತ ಬಂದಿದ್ದಾರೆ. 2008 ಹಾಗೂ 2013 ರಲ್ಲಿ ಸಿದ್ದರಾಮಯ್ಯ ಗೆಲುವು ಸಾಧಿಸಿ ಇಲ್ಲಿಂದಲೇ ವಿರೋಧ ಪಕ್ಷದ ನಾಯಕರಾಗಿ ಹೊರಹೊಮ್ಮಿದ್ದರು. 2013 ರಲ್ಲಿ ಮುಖ್ಯಮಂತ್ರಿ ಆಗಿ, 2018ರ ಚುನಾವಣೆಯಲ್ಲಿ ವರುಣಾ ಕ್ಷೇತ್ರವನ್ನು ಮಗ ಯತೀಂದ್ರ ಸಿದ್ದರಾಮಯ್ಯ ಅವರಿಗೆ ಬಿಟ್ಟುಕೊಟ್ಟು, ಚಾಮುಂಡೇಶ್ವರಿ ಕ್ಷೇತ್ರದಿಂದ ಸ್ಪರ್ಧೆ ಮಾಡಿ ಸೋಲು ಅನುಭವಿಸಿದರು.
ಆದರೆ, 2018ರ ಚುನಾವಣೆಯಲ್ಲಿ ಮಗ ಯತೀಂದ್ರ ಸಿದ್ದರಾಮಯ್ಯ ವರುಣಾದಿಂದ ಗೆಲುವು ಸಾಧಿಸಿದ್ದು, ಈ ಬಾರಿ ಚುನಾವಣೆಯಲ್ಲಿ ತಂದೆಗೆ ಮತ್ತೆ ವರುಣಾ ಕ್ಷೇತ್ರವನ್ನು ಬಿಟ್ಟುಕೊಟ್ಟಿದ್ದಾರೆ. ಈಗ ವರುಣಾದಲ್ಲಿ ಸಿದ್ದರಾಮಯ್ಯ ಹಾಗೂ ಬಿಜೆಪಿ ಸೋಮಣ್ಣನವರ ನಡುವೆ ನೇರ ಪೈಪೋಟಿ ಇದ್ದು. ಗೆಲುವಿಗಾಗಿ ತಂತ್ರ, ಅಬ್ಬರದ ಪ್ರಚಾರ ಹಾಗೂ ಜಾತಿ ಲೆಕ್ಕಾಚಾರ ನಡೆದಿದೆ.
ವರುಣಾದಲ್ಲಿ ಜಾತಿ ಲೆಕ್ಕಾಚಾರ:ಲಿಂಗಾಯತ-ವೀರಶೈವ ಸಮುದಾಯದ 55 ಸಾವಿರ, ದಲಿತರು 55 ಸಾವಿರ, ಕುರುಬ ಜನಾಂಗ 38 ಸಾವಿರ, ನಾಯಕರು 28 ಸಾವಿರ, ಇತರ ಹಿಂದುಳಿದ ವರ್ಗ 18 ಸಾವಿರ, ಒಕ್ಕಲಿಗರು 10 ಸಾವಿರ, ಮುಸ್ಲಿಮರು 5 ಸಾವಿರ, ಬ್ರಾಹ್ಮಣರು 4 ಸಾವಿರ ಸೇರಿದಂತೆ ಒಟ್ಟು 2,34,533 ಮತದಾರರಿದ್ದಾರೆ. ಇಲ್ಲಿಯವರೆಗೆ ನಡೆದ ಮೂರು ಚುನಾವಣೆಯಲ್ಲಿ ಅಂದರೆ 2008 ಹಾಗೂ 2013 ರಲ್ಲಿ ಸಿದ್ದರಾಮಯ್ಯ ಹಾಗೂ 2018 ರಲ್ಲಿ ಯತೀಂದ್ರ ಸಿದ್ದರಾಮಯ್ಯ ವರುಣಾದಿಂದ ಗೆಲುವು ಸಾಧಿಸಿದ್ದರು. ವರುಣಾ ಕಾಂಗ್ರೆಸ್ನ ಹಾಗೂ ಸಿದ್ದರಾಮಯ್ಯನವರ ಭದ್ರಕೋಟೆ ಆಗಿದೆ.