ಮೈಸೂರು:ಕೃಷ್ಣರಾಜ ಕ್ಷೇತ್ರದ ಶಾಸಕ ಎಸ್.ಎ.ರಾಮದಾಸ್ ಬಡವರಿಗೆ ಆಶ್ರಯ ಮನೆ ನೀಡುತ್ತೇನೆಂದು ಸುಳ್ಳು ಪ್ರಚಾರ ಮಾಡಿ ಬಡಜನರ ಕಣ್ಣಿಗೆ ಮಣ್ಣೆರುಚುತ್ತಿದ್ದು , ಆತ ಒಬ್ಬ ಸುಳ್ಳುಗಾರ, ಮೋಸಗಾರ ಎಂದು ಮಾಜಿ ಶಾಸಕ ಎಂ.ಕೆ.ಸೋಮಶೇಖರ್ ವಾಗ್ದಾಳಿ ನಡೆಸಿದ್ದಾರೆ.
ಶಾಸಕ ರಾಮದಾಸ್ ಒಬ್ಬ ಸುಳ್ಳುಗಾರ: ಎಂ.ಕೆ.ಸೋಮಶೇಖರ್ ವಾಗ್ದಾಳಿ - MLA Ramdas latest news
ಕೃಷ್ಣರಾಜ ಕ್ಷೇತ್ರದ ಶಾಸಕ ಎಸ್.ಎ.ರಾಮದಾಸ್ ಮೋಸಗಾರ, ಸುಳ್ಳುಗಾರ. ಬಡಜನರಿಗೆ ಮನೆ ನಿರ್ಮಾಣ ಮಾಡುವ ವಿಚಾರದಲ್ಲಿ ಮೋಸ ಮಾಡುತ್ತಿದ್ದಾರೆ ಎಂದು ಮಾಜಿ ಶಾಸಕ ಎಂ.ಕೆ.ಸೋಮಶೇಖರ್ ವಾಗ್ದಾಳಿ ನಡೆಸಿದ್ದಾರೆ.
ಇಂದು ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, "ಆಶ್ರಯ ಮನೆಗಳಿಗೆ ಸರ್ಕಾರದಿಂದ ಅನುಮತಿ ತರದಿದ್ದರೂ ನಿಮಗೆಲ್ಲರಿಗೂ ಮನೆ ಕೊಡಿಸುತ್ತೇನೆ. ಗೃಹಪ್ರವೇಶಕ್ಕೆ ನನ್ನನ್ನು ಮರೆಯದೆ ಕರೆಯಿರಿ ಎಂದು ಸುಳ್ಳು ಬೊಬ್ಬೆ ಹೊಡೆಯುವುದರ ಮೂಲಕ ಜನರಿಗೆ ಮಂಕು ಬೂದಿ ಎರಚುತ್ತಿದ್ದಾರೆ. ಅಲ್ಲದೆ ಕಾಂಗ್ರೆಸ್ ಸರ್ಕಾರದ ಆಳ್ವಿಕೆ ಸಂದರ್ಭದಲ್ಲಿ ನಾನು ಶಾಸಕನಾಗಿದ್ದಾಗ ಅನುಮತಿ ಪಡೆದು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಿಂದ 13.05 ಎಕರೆ ಜಮೀನನ್ನು ಹಣ ಪಾವತಿಸಿ ಪಡೆದಿದ್ದೆ. ಬಳಿಕ ಅದನ್ನು ನಗರ ಪಾಲಿಕೆಗೆ ಹಸ್ತಾಂತರಿಸಿ ಜಿ +2 ಮಾದರಿಯಲ್ಲಿ 1440 ಮನೆಗಳು ಹಾಗೂ ಗೂರೂರಿನಲ್ಲಿ 1644 ಮನೆಗಳನ್ನು ಕಟ್ಟಲಾಗಿದೆ. ನಂತರ ಫಲಾನುಭವಿಗಳನ್ನು ಗುರುತಿಸಿ ಹಂಚಿಕೆ ಮಾಡಲು ಜಿಲ್ಲಾಧಿಕಾರಿಗಳ ಖಾತೆಗೆ 18 ಕೋಟಿ ರೂ. ಜಮೆ ಮಾಡಿದ್ದೆ. ಆದರೆ ಅಲ್ಲಿ ಗುತ್ತಿಗೆದಾರರಿಗೆ ಕೆಲಸ ಪ್ರಾರಂಭಿಸಲು ಬಿಡದೆ ತಡೆ ಹಿಡಿದಿದ್ದಾರೆ. ಅದೇ ಯೋಜನೆಯನ್ನು ಜಿ +11 ಮಾದರಿ ಮನೆ ಕಟ್ಟುತ್ತೇವೆಂದು ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸಿದ್ದರು. ಸರ್ಕಾರದ ಮುಖ್ಯ ಕಾರ್ಯದರ್ಶಿ ಮತ್ತು ವಸತಿ ಸಚಿವ ವಿ.ಸೋಮಣ್ಣ ಆ ಪ್ರಸ್ತಾವನೆಯನ್ನು ರದ್ದು ಮಾಡಿದ್ದಾರೆ ಎಂದು ದೂರಿದರು.
ಮನೆ ನಿರ್ಮಾಣಕ್ಕೆ ಅನುಮತಿ ಬಾರದೆ ಇದ್ದರೂ ಜನರಿಗೆ ಸುಳ್ಳು ಹೇಳುತ್ತಿದ್ದಾರೆ. ತಮ್ಮದೇ ಸ್ವಂತ ವೆಬ್ಸೈಟ್ ಸೃಷ್ಟಿಸಿಕೊಂಡು ಇದರಲ್ಲಿ ಸಾರ್ವಜನಿಕರು ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಿ ಎಂದು ಹೇಳುತ್ತಿದ್ದಾರೆ. ಇಂತಹ ಸುಳ್ಳು ಹೆಚ್ಚು ದಿನ ಉಳಿಯುವುದಿಲ್ಲ. ನನ್ನ ಅವಧಿಯಲ್ಲಿ ಅನುಮೋದನೆಗೊಂಡಿರುವ ಕಾಮಗಾರಿಗಳಿಗೆ ಗುದ್ದಲಿ ಪೂಜೆ ಮಾಡಿಕೊಂಡು ಪ್ರಚಾರ ಗಿಟ್ಟಿಸಿಕೊಳ್ಳುತ್ತಿದ್ದಾರೆ. ಅಭಿವೃದ್ಧಿ ವಿಚಾರದಲ್ಲಿ ಬಹಿರಂಗವಾಗಿ ಚರ್ಚೆಗೆ ಬರಲಿ ಎಂದು ರಾಮದಾಸ್ ವಿರುದ್ಧ ವಾಗ್ದಾಳಿ ನಡೆಸಿದರು.