ಮೈಸೂರು: ಬಹುಶಃ ತಮ್ಮ ರಾಜಕೀಯ ಜೀವನದ ಕೊನೆಯ ಚುನಾವಣೆ ಎದುರಿಸುತ್ತಿರುವ ಹಾಗೂ ಮತ್ತೊಮ್ಮೆ ಮುಖ್ಯಮಂತ್ರಿ ಸ್ಥಾನದ ಮೇಲೆ ಕಣ್ಣಿಟ್ಟಿರುವ ಸಿದ್ದರಾಮಯ್ಯ ಈ ಬಾರಿ ಗೆಲ್ಲಲೇಬೇಕಾದ ಅನಿವಾರ್ಯತೆಯಲ್ಲಿದ್ದಾರೆ. ಈ ಹಿನ್ನೆಲೆಯಲ್ಲಿ ಗೆಲ್ಲುವ ಕ್ಷೇತ್ರ ಹುಡುಕಾಟದಲ್ಲಿದ್ದು, ಕಳೆದ ಬಾರಿಯಂತೆ ಈ ಬಾರಿ ಕೂಡ ಎರಡು ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡುವ ಯೋಚನೆಯಲ್ಲಿದ್ದಾರೆ.
ಪ್ರತಿಪಕ್ಷದ ನಾಯಕರಾದ ಸಿದ್ದರಾಮಯ್ಯ, ಮುಂದಿನ ಬಾರಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರುವ ಮೂಲಕ ತಾವು ಮತ್ತೊಮ್ಮೆ ಮುಖ್ಯಮಂತ್ರಿ ಆಗಬೇಕೆಂಬ ಆಸೆಯನ್ನು ಹೊಂದಿದ್ದಾರೆ. ಈ ಹಿನ್ನೆಲೆಯಲ್ಲಿ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಪಕ್ಷವನ್ನು ಗೆಲ್ಲಿಸುವ ಮೂಲಕ ತಾವು ಸಹ ಗೆಲ್ಲುವುದು ಮುಖ್ಯವಾಗಿದೆ. ಈ ಹಿನ್ನೆಲೆಯಲ್ಲಿ ಸುಲಭವಾಗಿ ಗೆಲ್ಲುವ ಕ್ಷೇತ್ರಗಳ ಹುಡುಕಾಟ ನಡೆಸಿದ್ದು, ಈಗಾಗಲೇ ಖಾಸಗಿ ಎಜೆನ್ಸಿ ಮೂಲಕ ಒಂದೆರಡು ಸರ್ವೆಗಳನ್ನು ನಡೆಸಿದ್ದಾರೆ. ಅದರಲ್ಲಿ ವರುಣ ಕ್ಷೇತ್ರ, ಕೋಲಾರ, ಚಾಮರಾಜಪೇಟೆ ಕ್ಷೇತ್ರಗಳ ಆಯ್ಕೆ ನಡೆದಿದೆ. ಮೊದಲ ಆಯ್ಕೆ ವರುಣ ಕ್ಷೇತ್ರದಿಂದ ಸ್ಪರ್ಧೆ ಮಾಡುವುದು ಮತ್ತು ಮತ್ತೊಂದು ಕ್ಷೇತ್ರದ ಕಡೆ ನಾಮಪತ್ರ ಸಲ್ಲಿಸಲು ಹೈಕಮಾಂಡ್ನಿಂದ ಒಪ್ಪಿಗೆ ಪಡೆಯಲು ಸಿದ್ದರಾಮಯ್ಯ ಪ್ಲಾನ್ ನಡೆಸಿದ್ದಾರೆ ಎನ್ನಲಾಗ್ತಿದೆ.
ಮೊದಲ ಆಯ್ಕೆ ವರುಣ ಕ್ಷೇತ್ರ:2013ರಲ್ಲಿ ವರುಣ ಕ್ಷೇತ್ರದಿಂದ ಆಯ್ಕೆಯಾಗಿ ಮುಖ್ಯಮಂತ್ರಿಯಾಗಿ ದೇವರಾಜ ಅರಸು ನಂತರ, 5 ವರ್ಷ ಅಧಿಕಾರ ಪೂರೈಸಿದ ಮುಖ್ಯಮಂತ್ರಿ ಎಂಬ ಖ್ಯಾತಿಗೆ ಸಿದ್ದರಾಮಯ್ಯ ಪಾತ್ರರಾಗಿದ್ದರು. 2018ರಲ್ಲಿ ರಾಜಕೀಯವಾಗಿ ಪುನರ್ಜನ್ಮ ನೀಡಿದ ಚಾಮುಂಡೇಶ್ವರಿ ಕ್ಷೇತ್ರದೊಂದಿಗೆ ಉತ್ತರ ಕರ್ನಾಟಕದಿಂದ ಬಾದಾಮಿ ಕ್ಷೇತ್ರದಿಂದಲೂ ಸ್ಪರ್ಧಿಸಿದ್ದರು.
ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಜೆಡಿಎಸ್ನ ಜಿ.ಟಿ ದೇವೇಗೌಡ ವಿರುದ್ಧ 36 ಸಾವಿರಕ್ಕೂ ಹೆಚ್ಚು ಮತಗಳಿಂದ ಸಿದ್ದರಾಮಯ್ಯ ಸೋಲು ಅನುಭವಿಸಿದ್ದರು. ಬಾದಾಮಿ ಕ್ಷೇತ್ರದಿಂದ ಅಲ್ಪ ಮತಗಳಿಂದ ಜಯಗಳಿಸಿ, ಸಮ್ಮಿಶ್ರ ಸರ್ಕಾರದಲ್ಲಿ ಸಮನ್ವಯ ಸಮಿತಿಯ ಅಧ್ಯಕ್ಷರಾಗಿ ಈಗ ವಿರೋಧ ಪಕ್ಷದ ನಾಯಕರಾಗಿದ್ದಾರೆ. ಈ ಬಾರಿ ವರುಣ ಕ್ಷೇತ್ರದಿಂದಲೇ ಸ್ಪರ್ಧೆ ಮಾಡಿ, ಮತ್ತೆ ಮುಖ್ಯಮಂತ್ರಿ ಆಗುವ ಕನಸನ್ನು ಸಿದ್ದರಾಮಯ್ಯ ಕಂಡಿದ್ದಾರೆ ಎಂದು ವಿಶ್ಲೇಷಿಸಲಾಗುತ್ತಿದೆ.
ಇದನ್ನೂ ಓದಿ:224 ಕ್ಷೇತ್ರದಲ್ಲಿ ಎಲ್ಲಿ ಬೇಕಾದರೂ ಸ್ಪರ್ಧಿಸುವವನು ನಿಜವಾದ ನಾಯಕ: ಸಿದ್ದರಾಮಯ್ಯ
ಈ ನಿಟ್ಟಿನಲ್ಲಿ ಈಗಾಗಲೇ ಎರಡು ಖಾಸಗಿ ಸರ್ವೆಗಳನ್ನು ಸಹ ನಡೆಸಿದ್ದು, ಅದರಲ್ಲಿ ಗೆಲುವು ಸುಲಭವಲ್ಲ, ಆದರೂ ಗೆಲ್ಲಬಹುದು ಎಂಬ ವರದಿಯ ಹಿನ್ನೆಲೆಯಲ್ಲಿ ಮೊದಲು ವರುಣ ಕ್ಷೇತ್ರದಿಂದ ನಾಮಪತ್ರ ಸಲ್ಲಿಸಿ, ಮತ್ತೊಂದು ಕ್ಷೇತ್ರದಲ್ಲೂ ಸ್ಪರ್ಧೆ ಮಾಡುವ ಬಗ್ಗೆ ಸಿದ್ದರಾಮಯ್ಯ ಆಲೋಚಿಸುತ್ತಿದ್ದಾರೆ ಎಂದೂ ಹೇಳಲಾಗುತ್ತಿದೆ.
ವರುಣ ಕ್ಷೇತ್ರದಿಂದ ಸಿದ್ದರಾಮಯ್ಯನವರು ಸ್ಪರ್ಧೆ ಮಾಡಿದರೆ ಕಳೆದ ಬಾರಿಗಿಂತ ಹೆಚ್ಚಿನ ಮತಗಳಿಂದ ಗೆಲ್ಲುತ್ತಾರೆ ಎಂದು ಕಾಂಗ್ರೆಸ್ನ ಮೈಸೂರು ಬಸವಣ್ಣ ಹಾಗೂ ವರುಣ ಕ್ಷೇತ್ರದ ಎಸ್ಸಿ ಘಟಕದ ಬ್ಲಾಕ್ ಅಧ್ಯಕ್ಷ ಮಹದೇವ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಈ ನಿಟ್ಟಿನಲ್ಲಿ ಮತ್ತೆ ವರುಣ ಕ್ಷೇತ್ರದಿಂದ ಸಿದ್ದರಾಮಯ್ಯನವರು ಸ್ಪರ್ಧೆ ಮಾಡಲಿ ಎಂದು ಆಹ್ವಾನ ನೀಡಿರುವುದಾಗಿ 'ಈಟಿವಿ ಭಾರತ' ಜೊತೆ ಅವರು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.
ಮುಂದಿನ ಚುನಾವಣೆಯಲ್ಲೂ ಎರಡು ಕ್ಷೇತ್ರಗಳಲ್ಲಿ ಸ್ಪರ್ಧೆಗೆ ಸಿದ್ದರಾಮಯ್ಯ ಒಲವು... ಹೇಗಿದೆ ಲೆಕ್ಕಾಚಾರ ಸಿದ್ದರಾಮಯ್ಯ ಲೆಕ್ಕಾಚಾರವೇನು?:ಮುಂದಿನ ಚುನಾವಣೆಯಲ್ಲಿ ಸಿದ್ದರಾಮಯ್ಯ ಗೆಲ್ಲಲೇಬೇಕಾದ ಅನಿವಾರ್ಯತೆ ಒಂದು ಕಡೆಯಾದರೆ, ಅವರನ್ನು ಶತಾಯಗತಾಯ ಸೋಲಿಸಬೇಕೆಂಬ ಗುರಿ ಹೊಂದಿರುವ ಜೆಡಿಎಸ್, ಬಿಜೆಪಿ ಹಾಗೂ ಕಾಂಗ್ರೆಸ್ ಒಳಗಿನ ಒಂದು ಗುಂಪು ಇದರ ಜೊತೆಗೆ ಸಿದ್ದರಾಮಯ್ಯನವರ ವಿರೋಧಿ ಗುಂಪು ಕೆಲಸ ಮಾಡುವುದು ಅಷ್ಟೇ ಸತ್ಯ.
ಹೀಗಾಗಿಯೇ ಜಾತಿ ಲೆಕ್ಕಾಚಾರ, ಪ್ರಬಲ ಅಭ್ಯರ್ಥಿಗಳ ಕೊರತೆ ಹಾಗೂ ಕ್ಷೇತ್ರದ ಮೇಲಿನ ಹಿಡಿತವನ್ನು ಗಮನಿಸಿ ಮುಂದಿನ ಚುನಾವಣೆಯಲ್ಲಿ ವರುಣ ಕ್ಷೇತ್ರದಿಂದ ಸ್ಪರ್ಧೆ ಮಾಡಿದರೆ ಗೆಲುವು ಕಷ್ಟ ಆಗಲಾರದು ಎಂಬ ಲೆಕ್ಕಾಚಾರ ಒಂದು ಕಡೆಯಾಗಿದೆ. ಮತ್ತೊಂದು ಕಡೆ ತಮ್ಮ ಪುತ್ರ ಹಾಲಿ ಶಾಸಕ ಯತೀಂದ್ರ ಸಿದ್ದರಾಮಯ್ಯ ವರುಣ ಕ್ಷೇತ್ರದ ಶಾಸಕರಾಗಿದ್ದು, ಅವರನ್ನು ಮುಂದಿನ ಬಾರಿ ಚಾಮುಂಡೇಶ್ವರಿ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಮಾಡುವುದು ಸಿದ್ದರಾಮಯ್ಯನವರ ಲೆಕ್ಕಾಚಾರವಾಗಿದೆ.
ಈ ಹಿನ್ನೆಲೆಯಲ್ಲಿ ಈಗಾಗಲೇ ಚಾಮುಂಡೇಶ್ವರಿ ಕ್ಷೇತ್ರದ ಪ್ರಬಲ ಒಕ್ಕಲಿಗ ನಾಯಕರನ್ನು ಕಾಂಗ್ರೆಸ್ಗೆ ಸೆಳೆಯಲು ಮಾತುಕತೆ ನಡೆಸಿರುವುದು ಸುಳ್ಳಲ್ಲ. ಹೀಗಾಗಿ ತಮ್ಮ ಹಾಗೂ ಪುತ್ರನ ಭವಿಷ್ಯದ ದೃಷ್ಟಿಯಿಂದ ಮುಂದಿನ ಚುನಾವಣೆಯಲ್ಲಿ ವರುಣ ಕ್ಷೇತ್ರದಿಂದ ತಾವು ಹಾಗೂ ಚಾಮುಂಡೇಶ್ವರಿ ಕ್ಷೇತ್ರದಿಂದ ತಮ್ಮ ಪುತ್ರನಿಗೆ ಟಿಕೆಟ್ ತೆಗೆದುಕೊಂಡು ಎರಡು ಕ್ಷೇತ್ರದ ಜೊತೆಗೆ ಹಳೇ ಮೈಸೂರು ಭಾಗದ, ಮೈಸೂರು, ಚಾಮರಾಜನಗರ, ಮಂಡ್ಯ ಹಾಗೂ ಕೊಡಗು ಜಿಲ್ಲೆಗಳಲ್ಲಿ ಅತೀಹೆಚ್ಚು ಸ್ಥಾನಗಳಲ್ಲಿ ಕಾಂಗ್ರೆಸ್ ಗೆಲ್ಲಿಸುವ ಮೂಲಕ ಬಹುಮತ ಬಂದರೆ ತಾವು ಮುಖ್ಯಮಂತ್ರಿ ಆಗುವ ದಾಳ ಉರುಳಿಸಲು ಸಾಧ್ಯವಾಗಲಿದೆ ಎಂಬ ಯೋಚನೆಯಲ್ಲೂ ಸಿದ್ದರಾಮಯ್ಯ ಇದ್ದಾರೆ. ಮುಂದಿನ ಚುನಾವಣೆಯಲ್ಲಿ ಸಿದ್ದರಾಮಯ್ಯ ವರುಣ ಕ್ಷೇತ್ರದಿಂದ ಸ್ಪರ್ಧೆ ಮಾಡುವ ಸಾಧ್ಯತೆ ಹೆಚ್ಚಿದೆ ಎನ್ನುತ್ತವೆ ಆಪ್ತ ಮೂಲಗಳು.
ಇದನ್ನೂ ಓದಿ:ಕ್ಷೇತ್ರ ಹುಡುಕಾಟ ಆರಂಭ.. ಕೋಲಾರ ಜನರ ನಾಡಿಮಿಡಿತ ಅರಿತ ಸಿದ್ದರಾಮಯ್ಯ: ಕುತೂಹಲ ಹೆಚ್ಚಿಸಿದ ಸ್ಪರ್ಧೆ ಹೇಳಿಕೆ