ಮೈಸೂರು: ಕಾಂಗ್ರೆಸ್ ಶಾಸಕ ಬಿ ಆರ್ ಪಾಟೀಲ್ ಅಸಮಾಧಾನ ವಿಚಾರದಲ್ಲಿ ಸರ್ಕಾರ ಸೆಲ್ಫ್ ಸೂಸೈಡ್ ಆಗುತ್ತಾ? ಅಪಘಾತ ಅಥವಾ ಹಿಟ್ ವಿಕೆಟ್ ಆಗುತ್ತಾ? ಎಲ್ಲದಕ್ಕೂ ಕಾದು ನೋಡಿ ಎಂದು ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ, ರಾಜ್ಯ ಸರ್ಕಾರದ ಆಡಳಿತ ವೈಖರಿ ಬಗ್ಗೆ ಕಿಡಿ ಕಾರಿದರು.
ಮೈಸೂರಿನಲ್ಲಿ ಮಾಧ್ಯಮಗಳ ಜೊತೆ ಮಾತಮಾಡಿದ ಅವರು, ಇದು ಕೇವಲ ಬಿ ಆರ್ ಪಾಟೀಲ್ ಒಬ್ಬರ ಸಮಸ್ಯೆ ಅಲ್ಲ. ಇಡೀ ವ್ಯವಸ್ಥೆಯ ಸಮಸ್ಯೆಯೇ ಹೀಗಾಗಿದೆ. ಎಲ್ಲದಕ್ಕೂ ಕಾಲವೇ ಉತ್ತರಸಲಿದೆ. ಕಾದು ನೋಡಿ. ಹೀಗೆ ಆಗುತ್ತದೆ, ಹಾಗೆ ಆಗುತ್ತದೆ ಅಂತ ಹೇಳಲು ನಾನು ಜ್ಯೋತಿಷಿ ಅಲ್ಲ. ಹಿರಿಯ ಶಾಸಕರು ಅವರದ್ದೇ ಪಕ್ಷದ ಮಂತ್ರಿಗಳಿಂದ ಮನನೊಂದು ಪಕ್ಷ ಬದಲಾವಣೆ ಮಾಡಿದರೆ ಇದು ಒಳ್ಳೆಯ ಬೆಳವಣಿಗೆ ಅಲ್ಲ. ಆಡಳಿತ ಪಕ್ಷದ ಶಾಸಕರ ಪರಿಸ್ಥಿತಿಯೇ ಹೀಗಾದರೆ ಜನರ ಕಷ್ಟ ಏನಾಗಬೇಕು ಎಂದು ಹೆಚ್ಡಿಕೆ ಪ್ರಶ್ನೆ ಮಾಡಿದರು.
ಶಾಸಕರ ರೀತಿಯಲ್ಲಿ ಜನರಿಗೂ ಅದೇ ಭಾವನೆ ಮೂಡಿದೆ. ಅಭಿವೃದ್ಧಿ ಕೆಲಸಗಳನ್ನು ಅಕ್ರಮ ಎಂದು ಅನುಮಾನದಿಂದ ನೋಡುವುದು ಅವರಿಗೆ ಸಾಮಾನ್ಯವಾಗಿದೆ. ಶಾಸಕರು ತನಿಖೆಗೆ ಒತ್ತಾಯ ಮಾಡಿರುವುದು ಸರಿಯಿದೆ. ಆದರೆ, ಸದನಕ್ಕೆ ಬರುವುದಿಲ್ಲ ಎಂದು ಹೇಳಿದರೇ ಒಳ್ಳೆಯ ಬೆಳವಣಿಗೆ ಅಲ್ಲ. ಸರ್ಕಾರದಲ್ಲಿ ಶಾಸಕರಿಗೆ ಎಷ್ಟು ಬೆಲೆ ಇದೆ ಅನ್ನೋದು ಇದರಿಂದ ಗೊತ್ತಾಗುತ್ತದೆ. ಇದು ನಿರಂತರ ನಡೆಯುತ್ತಿದೆ. ಪದೆ ಪದೇ ಈ ರೀತಿಯ ಬೆಳವಣಿಗೆಗಳು ಆಗುತ್ತಿರುವುದರಿಂದ ಆಡಳಿತ ಪಕ್ಷದಲ್ಲಿ ಮುಂದೇ ಏನಾಗುತ್ತದೆ ಎಂಬ ಚರ್ಚೆ ಆರಂಭವಾಗಿದೆ. ಸರ್ಕಾರ ಈ ಬಗ್ಗೆ ಚಿಂತನೆ ಮಾಡಬೇಕು ಎಂದು ಮಾಜಿ ಸಿಎಂ ಸಲಹೆ ನೀಡಿದರು.
ಯತ್ನಾಳ್ಗೆ ಕುಮಾರಸ್ವಾಮಿ ಬೆಂಬಲ: ಸರ್ಕಾರ ಡಿ ಕೆ ಶಿವಕುಮಾರ್ ವಿರುದ್ಧ ಸಿಬಿಐ ತನಿಖೆ ವಾಪಸ್ ಪಡೆದ ಸರ್ಕಾರದ ಕ್ರಮದ ವಿರುದ್ಧ ಯತ್ನಾಳ್ ನ್ಯಾಯಾಲಯದ ಮೊರೆ ಹೋಗಿರುವುದಕ್ಕೆ ಬೆಂಬಲ ಸೂಚಿಸಿದ ಹೆಚ್ಡಿಕೆ, ಜವಾಬ್ದಾರಿಯುತ ಹಿರಿಯ ಶಾಸಕರು ಸರ್ಕಾರ ತೆಗೆದುಕೊಂಡ ತಪ್ಪು ನಿರ್ಣಯವನ್ನು ಪ್ರಶ್ನಿಸಿದ್ದಾರೆ. ಕಾನೂನು ಬಾಹಿರ ಚಟುವಟಿಕೆ ಮಾಡಿ, ಅದರಿಂದ ರಕ್ಷಣೆ ಪಡೆಯುವುದರಲ್ಲಿ ಡಿ ಕೆ ಶಿವಕುಮಾರ್ ನಿಪುಣರು. ಸಂವಿಧಾನದ ಬಗ್ಗೆ ಗೌರವ ಇದ್ದರೆ, ಈ ರೀತಿಯ ತೀರ್ಮಾನ ಮಾಡುತ್ತಿರಲಿಲ್ಲ. ದೇಶದ ಸಂವಿಧಾನ ಸಂಸ್ಥೆಗಳನ್ನು ದಾರತಪ್ಪಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ರೀತಿ ಸರ್ಕಾರ ದಾರಿ ತಪ್ಪಿದೆ. ಕಾನೂನು ತಜ್ಞರ ಅಭಿಪ್ರಾಯವೂ ಸಹ ಇದೇ ಆಗಿದೆ. ಇವರ ನಡವಳಿಕೆಯಲ್ಲಿ ಪರಿಶುದ್ಧತೆ ಹಾಗೂ ಪ್ರಾಮಾಣಿಕತೆ ಇದ್ದಿದ್ದರೆ ತನಿಖೆಗೆ ಒಪ್ಪಬೇಕಿತ್ತು, ಆದರೆ, ಅದು ಅವರಲ್ಲಿಲ್ಲ. ತನಿಖೆಗೆ ಕಾನೂನು ಸಮ್ಮತವಾಗಿ ನೀಡಲಾಗಿದೆ. ಈ ಬಗ್ಗೆ ಸದನದಲ್ಲಿ ಚರ್ಚೆ ಮಾಡುತ್ತೇನೆ ಎಂದರು.
ಸಿಎಂ ಸಿದ್ದರಾಮಯ್ಯ ಒಬ್ಬ ವಕೀಲರಾಗಿ, ಕಾನೂನು ಉಪನ್ಯಾಸಕರಾಗಿ ಅವರಿಂದ ಈ ತೀರ್ಮಾನ ಬಂದಿರುವುದು ಬೇಸರದ ಸಂಗತಿ. ಕಾನೂನು ಬಾಹಿರ ಚಟುವಟಿಕೆಗಳಿಗೆ ರಕ್ಷಣೆ ಕೊಡಲು ಈ ರೀತಿ ಮಾಡುತ್ತಿದ್ದಾರೆ ಎಂಬುದರಲ್ಲಿ ಯಾವುದೇ ಸಂಶಯವಿಲ್ಲ. ಈ ಮೂಲಕ ಸಿಎಂ ಸಿದ್ದರಾಮಯ್ಯ ಡಿಸಿಎಂ ಡಿ ಕೆ ಶಿವಕುಮಾರ್ ಅವರ ಕಾಲಿನ ಕೆಳಗೆ ಇದ್ದೇವೆ ಎಂದು ಪ್ರದರ್ಶನ ಮಾಡಿದ್ದಾರೆ. ಯಾವ ಯಾವ ತಪ್ಪುಗಳನ್ನು ಮಾಡಿದರು ಸರಿಪಡಿಸುವುದು ಅವರಿಗೆ ಗೊತ್ತಿದೆ ಎಂದು ವ್ಯಂಗ್ಯವಾಡಿದರು.