ಮೈಸೂರು:ಕಾಂಗ್ರೆಸ್ ಜೊತೆಗೆ ಹೋಗಲೂ ನಮಗೆ ಇಷ್ಟವಿಲ್ಲ.ಕುಮಾರಸ್ವಾಮಿಯವರು ಈ ಹಿಂದೆ ಕಾಂಗ್ರೆಸ್ ಜೊತೆ ಸೇರಿ ಸರ್ಕಾರ ರಚಿಸಿದಾಗ ಅವರು ಹೊಟ್ಟೆ ಉರಿಯಿಂದ ಅವರನ್ನು ಸಿಎಂ ಸ್ಥಾನದಿಂದ ಕೆಳಗಿಳಿಸಿದ್ದರು. ಕಾಂಗ್ರೆಸ್ ಹೊಡೆತ ತಡೆಯಲು ಆಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ಲೋಕಸಭಾ ಚುನಾವಣೆಗೆ ಬಿಜೆಪಿ ಜೊತೆ ಮೈತ್ರಿಗೆ ಎಲ್ಲರ ಒಲವು ಇದೆ ಎಂದು ಶಾಸಕ ಜಿ ಟಿ ದೇವೇಗೌಡ ಮೈಸೂರಿನಲ್ಲಿ ಹೇಳಿಕೆ ನೀಡಿದ್ದಾರೆ.
ರಾಜ್ಯ ಬಿಜೆಪಿ ಜೊತೆ ಜೆಡಿಎಸ್ ಮೈತ್ರಿ ವಿಚಾರದ ಬಗ್ಗೆ ಮೈಸೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಜೆಡಿಎಸ್ ಶಾಸಕ ಹಾಗೂ ಕೋರ್ ಕಮಿಟಿ ಅಧ್ಯಕ್ಷ ಜಿ ಟಿ. ದೇವೇಗೌಡ, ಕಳೆದ 6ನೇ ತಾರೀಖಿನಂದು 19 ಶಾಸಕರು, 7 ಪರಿಷತ್ ಸದಸ್ಯರು, ಮಾಜಿ ಶಾಸಕರು ಮುಖಂಡರ ಸಭೆ ನಡೆಸಿದ್ದೆವು. ಆ ಸಭೆಯಲ್ಲಿ ಎಚ್ ಡಿ. ದೇವೇಗೌಡರು, ಸಿ. ಎಂ. ಇಬ್ರಾಹಿಂ, ಎಚ್. ಡಿ. ರೇವಣ್ಣ ಸೇರಿ ಎಲ್ಲರೂ ಆ ಸಭೆಯಲ್ಲಿ ಭಾಗಿಯಾಗಿದ್ದರು. ಸೆಪ್ಟೆಂಬರ್ 10 ರಂದು ನಡೆಯುವ ಜೆಡಿಎಸ್ ಸಮಾವೇಶದ ಬಗ್ಗೆ ಅಭಿಪ್ರಾಯ ಪಡೆಯಲು ಆ ಸಭೆ ನಡೆಸಿದ್ದೆವು. ಅಲ್ಲಿದ್ದ ಬಹುತೇಕ ಶಾಸಕರು, ಪರಿಷತ್ ಸದಸ್ಯರು ಕಾಂಗ್ರೆಸ್ ದಬ್ಬಾಳಿಕೆಯ ಬಗ್ಗೆ ಹೇಳಿದರು.
ಪಿರಿಯಾಪಟ್ಟಣದಲ್ಲಿ ನಮ್ಮ ಕಾರ್ಯಕರ್ತರನ್ನು ಜೈಲಿಗೆ ಕಳುಹಿಸಲು ಎಫ್ಐಆರ್ ದಾಖಲಾಗುತ್ತಿದೆ. ಅಧಿಕಾರಿಗಳ ವರ್ಗಾವಣೆ ಮಾಡುತ್ತಿದ್ದಾರೆ. ನಮ್ಮ ಕಾರ್ಯಕರ್ತರಿಗೆ ರಕ್ಷಣೆ ಸಿಗುತ್ತಿಲ್ಲ. ಗ್ಯಾರಂಟಿ ಹಿನ್ನೆಲೆ ಅಭಿವೃದ್ಧಿ ಕೆಲಸಗಳು ಕುಂಠಿತವಾಗುತ್ತಿವೆ. ಗುತ್ತಿಗೆದಾರರು ಸಂಕಷ್ಟಕ್ಕೆ ಸಿಲುಕುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಬರುವ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅನ್ನು ಸೋಲಿಸಬೇಕು ಎಂದು ಶಾಸಕ ಜಿ ಟಿ ದೇವೇಗೌಡರು ಹೇಳಿಕೆ ನೀಡಿದರು.