ಮೈಸೂರು: ಮೈಸೂರಿನ ಕಿಸಾನ್ ಸ್ವರಾಜ್ ಐದನೇ ಸಮ್ಮೇಳನ ಉದ್ಘಾಟನೆ ಮಾಡಿ ಮಾತನಾಡಿದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್, ಈ ಸಮ್ಮೇಳನವನ್ನು ಮೈಸೂರಿನಲ್ಲಿ ಆಯೋಜನೆ ಮಾಡಿರುವುದು ತುಂಬಾ ಹೆಮ್ಮೆಯ ವಿಚಾರ. ನಾನು ಮೈಸೂರು ಅರಮನೆಯ ಜವಾಬ್ದಾರಿಯನ್ನು ವಹಿಸಿಕೊಂಡು 7 ವರ್ಷವಾಗಿದೆ. ಇದರಲ್ಲಿ ಹಲವಾರು ರೈತ ಕಾರ್ಯಕ್ರಮದಲ್ಲಿ ನಾನು ಭಾಗವಹಿಸಿದ್ದೇನೆ. ರೈತ ಚಟುವಟಿಕೆಗಳು, ಅವರ ಸಮಸ್ಯೆಗಳು, ಅಲ್ಲಿನ ಪದ್ಧತಿಗಳು, ರೈತ ಕ್ಷೇತ್ರದ ಬದಲಾವಣೆಗಳ ಬಗ್ಗೆ ತಿಳಿದುಕೊಂಡಿದ್ದೇನೆ ಎಂದರು.
ಹಾಗೆ ಮಾತನಾಡಿದ ಅವರು, ಸಾವಯವ ಕೃಷಿ ಜಾಗತಿಕ ತಾಪಮಾನ, ಹವಾಮಾನ ವೈಪರೀತ್ಯ ಇವುಗಳನ್ನು ಬಗೆ ಹರಿಸಲು ಇರುವ ವಿಧಾನಗಳ ಬಗ್ಗೆ ತಜ್ಞರೊಂದಿಗೆ ಚರ್ಚೆ ಮಾಡಿ ಕೆಲವು ವಿಚಾರಗಳನ್ನು ತಿಳಿದುಕೊಂಡಿದ್ದು, ಒಬ್ಬ ಯುವಕನಾಗಿ ಕಲಿಯುವ ದಾರಿಯಲ್ಲಿ ಸಾರ್ವತ್ರಿಕ ಸತ್ಯ ಎಂದರೆ ರೈತರ ಹಿತ ರಕ್ಷಣೆಯಿಂದ ದೇಶ ಸಮೃದ್ಧವಾಗುತ್ತದೆ ಎಂದು ಯದುವೀರ್ ಹೇಳಿದರು.
ನಾವೆಲ್ಲ ಈಗ ಪ್ರಕೃತಿ ಸಂರಕ್ಷಣೆ ಮಾಡಬೇಕು. ಮಣ್ಣಿನ ಸಂರಕ್ಷಣೆ, ನೀರಿನ ಸಂರಕ್ಷಣೆ, ವಾಯು ಮಾಲಿನ್ಯ ನಿಯಂತ್ರಣ ಮಾಡಲು ಹಲವಾರು ಕಾರ್ಯಕ್ರಮಗಳನ್ನು ಮಾಡಬೇಕಾಗಿದ್ದು, ನನ್ನ ಅಭಿಪ್ರಾಯದಲ್ಲಿ ಪ್ರತಿಯೊಬ್ಬ ನಾಗರೀಕನು ರೈತನಾದರೆ ಎಲ್ಲವೂ ಸರಿಯಾಗುತ್ತದೆ ಎಂದರು.