ಮೈಸೂರು: ಅಂಗಾಂಗ ದಾನಗಳಲ್ಲಿ ಎರಡು ವಿಧ ಮೊದಲನೆಯದು ಲೈವ್ ಡೊನೇಷನ್(ಬದುಕಿದ್ದಾಗ ಅಂಗಾಂಗ ದಾನ ಮಾಡುವುದು) ಎರಡನೇಯದು ಕೆಡವಾರ್ ಡೊನೇಷನ್ (ಮೆದುಳು ನಿಷ್ಕ್ರಿಯಗೊಂಡಿರುವವರು). ಈ ಅಂಗಾಂಗ ದಾನ ಹೇಗೆ ನಡೆಯುತ್ತದೆ ಎಂಬುದರ ಬಗ್ಗೆ ಬಿ.ಜಿ.ಎಸ್. ಅಪೋಲೋ ಆಸ್ಪತ್ರೆಯ ಮೂತ್ರಪಿಂಡ ಶಾಸ್ತ್ರಜ್ಞರಾದ ಡಾ. ಪ್ರವೀಣ್ ಚಂದ್ರಶೇಖರ್ ಅವರು 'ಈಟಿವಿ ಭಾರತ'ಕ್ಕೆ ನೀಡಿದ ಸಂದರ್ಶನ ಇಲ್ಲಿದೆ..
ಬದುಕಿದ್ದಾಗ ನೀಡುವ ಅಂಗಾಂಗ ದಾನ( ಲೈವ್ ಡೊನೇಷನ್) ಎಂದರೆ ವ್ಯಕ್ತಿ ಬದುಕಿದ್ದಾಗಲೇ ಅಂಗಾಂಗ ವೈಫಲ್ಯವಾಗಿರುತ್ತದೆ. ಅಂತಹ ಸಂದರ್ಭದಲ್ಲಿ ಅವರ ಕುಟುಂಬದವರಾದ ಅಪ್ಪ, ಅಮ್ಮ, ತಮ್ಮ ಅಣ್ಣ ತಂಗಿ ಅಥವಾ ಗಂಡ, ಹೆಂಡತಿ ಹೀಗೆ ಸಂಬಂಧಿಕರು ರೋಗಿಯ ಅಂಗಾಂಗ ದಾನ ಮಾಡಲು ಮುಂದೆ ಬಂದರೆ ಅವರಿಂದ ಖಚಿತ ಪಡಿಸಿಕೊಂಡು ನಂತರ ಆಸ್ಪತ್ರೆಯ ಆಡಳಿತ ವ್ಯವಸ್ಥೆಯಿಂದ ಅನುಮತಿ ಪಡೆದು ಅಂಗಾಂಗ ಕಸಿ ಮಾಡುತ್ತೇವೆ. ಕೆಲವೊಮ್ಮೆ ದುಡ್ಡಿಗೋಸ್ಕರ ಅಂಗಾಂಗ ದಾನ ಮಾಡಲು ಮುಂದೆ ಬಂದಿರುತ್ತಾರೆ. ಮೊದಲು ಅದನ್ನು ಖಚಿತ ಪಡಿಸಿಕೊಂಡು ನಂತರ ಅಂಗಾಂಗ ದಾನ ಪಡೆಯಲಾಗುತ್ತದೆ ಎಂದು ವಿವರಿಸಿದ್ದಾರೆ.
ಈ ಅಂಗಾಂಗ ದಾನ ಕಾರ್ಯದ ಪ್ರಮುಖ ಕೆಲಸಗಳೇನು?..ಅಂಗಾಂಗ ದಾನ ಮಾಡುವ ವ್ಯಕ್ತಿಯ ಹಾಗೂ ರೋಗಿಯ ರಕ್ತದ ಗುಂಪನ್ನು ಮೊದಲಿಗೆ ಪರೀಕ್ಷೆ ಮಾಡಲಾಗುತ್ತದೆ. ನಂತರ ಅಂಗಾಂಗ ದಾನ ಮಾಡುವವರ ಆರೋಗ್ಯವನ್ನು ತಪಾಸಣೆ ಮಾಡಲಾಗುತ್ತದೆ. ಮೆಡಿಕಲ್, ಕ್ಲಿನಿಕಲ್ ಹಾಗೂ ಫಿಟ್ನೆಸ್ ಟೆಸ್ಟ್ ಮಾಡಲಾಗುತ್ತದೆ. ಅದು ಎಲ್ಲ ಸರಿ ಇದ್ದರೆ ನಂತರ ಅಂಗಾಂಗಗಳನ್ನು ದಾನವಾಗಿ ಪಡೆಯಲಾಗುತ್ತದೆ.
ಇದನ್ನೂ ಓದಿ: ಮೂರು ಹಾವುಗಳ ಜೊತೆ ಚೆಲ್ಲಾಟ: ಸಾವಿರಾರು ಉರಗಗಳ ರಕ್ಷಕ ಎಡವಟ್ಟಿನಿಂದ ಆಸ್ಪತ್ರೆ ಸೇರಿದ
ಲೈವ್ ಡೊನೇಷನ್ನಲ್ಲಿ ಕಿಡ್ನಿ, ಲಿವರ್ನ ಒಂದು ಭಾಗ ದಾನ ಮಾಡಬಹುದು. ದಾನ ಮಾಡಿದ ನಂತರ ದಾನಿ ಹೇಗೆ ಮುಂಜಾಗ್ರತೆ ವಹಿಸಬೇಕು ಹಾಗೂ ದಾನ ಪಡೆದ ರೋಗಿ ಹೇಗೆ ಇರಬೇಕು ಎಂಬುದನ್ನು ನಾವು ಸೂಚಿಸುತ್ತೇವೆ. ಜೊತೆಗೆ ಲಿವಿಂಗ್ ಡೊನೇಷನ್ ಅನ್ನು ಸಂಬಂಧಿಕರು ಹೊರತುಪಡಿಸಿ ಹೊರಗಿನವರು ಮಾಡಬಹುದು. ಆಗ ರಾಜ್ಯದ ಕಮಿಟಿಯಿಂದ ಅನುಮತಿ ಪಡೆಯಬೇಕು ಎಂದು ವೈದ್ಯರು ವಿವರಿಸಿದರು.
ಎರಡನೇ ಮಾದರಿಯ ದಾನದ ಪ್ರಕ್ರಿಯೆ ಹೇಗಿರುತ್ತದೆ?..ಎರಡನೇಯದು ಕಡವರ್ ಡೊನೇಷನ್, ಅಂದರೆ ಮೆದುಳು ನಿಷ್ಕ್ರಿಯಗೊಂಡವರು ಅಂಗಾಂಗ ದಾನ ಮಾಡಬಹುದು. ಬೇರೆ ದೇಶಗಳಲ್ಲಿ ಹೃದಯಾಘಾತವಾದವರೂ ಸಹ ಅಂಗಾಂಗ ದಾನ ಮಾಡಬಹುದು. ಆದರೆ, ನಮ್ಮಲ್ಲಿ ಮೆದುಳು ನಿಷ್ಕ್ರಿಯಗೊಂಡವರು ಮಾತ್ರ ಅಂಗಾಂಗ ದಾನ ಮಾಡಲು ಅವಕಾಶವಿದೆ.
ನಮ್ಮಲ್ಲಿ ಅಪಘಾತದಿಂದ ಮೆದುಳು ನಿಷ್ಕ್ರಿಯಗೊಂಡಿರುವ ಕೇಸ್ಗಳು ಹೆಚ್ಚಾಗಿ ಬರುತ್ತವೆ. ಮೊದಲು ನಾವು ಎಪ್ನಿಯಾ ಟೆಸ್ಟ್ ಮಾಡಿ ಮೆದುಳು ನಿಷ್ಕ್ರಿಯಗೊಂಡಿದಿಯಾ ಎಂದು 3 ರಿಂದ 4 ಬಾರಿ ಟೆಸ್ಟ್ ಮಾಡಿ ಖಚಿತ ಪಡಿಸಿಕೊಳ್ಳುತ್ತೇವೆ. ನಂತರ ಆ ರೋಗಿ ಅಂಗಾಂಗ ದಾನ ಮಾಡಲು ಆ ವ್ಯಕ್ತಿಯ ಅಂಗಾಂಗಗಳು ಆರೋಗ್ಯವಾಗಿವೆಯಾ ಎಂದು ಖಚಿತಪಡಿಸಿಕೊಳ್ಳುತ್ತೇವೆ. ಮೆದುಳು ನಿಷ್ಕ್ರಿಯಗೊಳ್ಳದೆ ಕಾನೂನು ಅಥವಾ ಮೆಡಿಕಲ್ ಪ್ರಕಾರ ಸಾವು ಎಂದು ನಿರ್ಧರಿಸಲು ಸಾಧ್ಯವಿಲ್ಲ ಎಂದು ಹೇಳಿದರು.
ಮೆದುಳು ನಿಷ್ಕ್ರಿಯಗೊಂಡರೆ ಅದನ್ನು ಮೆಡಿಕಲ್ ಟರ್ಮ್ ನಲ್ಲಿ ಸಾವಿಗೆ ಸಮ ಎನ್ನುತ್ತೇವೆ. ನಂತರ ಮೆದುಳು ನಿಷ್ಕ್ರಿಯಗೊಂಡಿರುವ ವ್ಯಕ್ತಿಯ ಕುಟುಂಬದವರಿಗೆ ವಿಷಯ ತಿಳಿಸುತ್ತೇವೆ. ಬಳಿಕ ಅಂಗಾಂಗ ದಾನದ ಬಗ್ಗೆ ಹೇಳುತ್ತೇವೆ. ಅವರು ಅಂಗಾಂಗ ದಾನಕ್ಕೆ ಒಪ್ಪಿಗೆ ನೀಡಿದರೆ ಅಂಗಾಂಗಗಳನ್ನು ತೆಗೆದುಕೊಳ್ಳುತ್ತೇವೆ. ಕೆಲವೊಮ್ಮೆ ಎಲ್ಲಾ ಅಂಗಾಂಗ ತೆಗೆದುಕೊಳ್ಳಲು ಆಗುವುದಿಲ್ಲ. ಅಪಘಾತದಲ್ಲಿ ಕೆಲವು ಡ್ಯಾಮೇಜ್ ಆಗಿರುತ್ತವೆ, ಮತ್ತೆ ಕೆಲವು ಮನೆಯವರು ಎಲ್ಲಾ ಅಂಗಾಂಗಗಳನ್ನು ದಾನ ಮಾಡಲು ಒಪ್ಪುವುದಿಲ್ಲ.
ಮೆದುಳು ನಿಷ್ಕ್ರಿಯಗೊಂಡ ವ್ಯಕ್ತಿಗಳಿಂದ ಬೇಗ ಅಂಗಾಂಗಗಳನ್ನು ತೆಗೆದುಕೊಳ್ಳಬೇಕಾಗುತ್ತದೆ. ನಮಗೆ ಸಮಯವಿರುವುದಿಲ್ಲ. ಜೊತೆಗೆ ನಾವು ಅಂಗಾಂಗ ದಾನ ಪಡೆಯುವಾಗ ಪೊಲೀಸರಿಗೆ ಮಾಹಿತಿ ನೀಡುತ್ತೇವೆ. ಜೊತೆಗೆ ಸ್ಟೇಟ್ ಆರ್ಗನ್ ಆ್ಯಂಡ್ ಟಿಷ್ಯೂ ಟ್ರಾನ್ಸ್ ಪ್ಲಾಂಟೇಷನ್ ಆರ್ಗನೈಸೇಶನ್ ಇದೆ ಈಗ ಅದನ್ನು ಜೀವಸಾರ್ಥಕತೆ ಎಂದು ಕರೆಯುತ್ತಾರೆ. ಅವರಿಗೆ ಮಾಹಿತಿ ನೀಡುತ್ತೇವೆ. ಅಲ್ಲಿ ಅಂಗಾಂಗ ಬೇಕಾಗಿರುವವರು ಲಿಸ್ಟ್ನಲ್ಲಿ ಇರುತ್ತಾರೆ. ಅವರಿಗೆ ಅಂಗಾಂಗ ಕಸಿ ಮಾಡಲಾಗುತ್ತದೆ ಎಂದು ಮಾಹಿತಿ ನೀಡಿದರು.
ಕಸಿ ಕಾರ್ಯ ಹೇಗೆ ನಡೆಯುತ್ತದೆ?..ಅಂಗಾಂಗಗಳನ್ನು ತೆಗೆದುಕೊಂಡ ನಂತರ ಬೇರೆ ರೋಗಿಗೆ ಅಂಗಾಂಗ ಕಸಿ ಮಾಡಲಾಗಿರುತ್ತದೆ. ಹಾಗಾಗಿ ಅವರ ದೇಹಕ್ಕೆ ಸರಿ ಹೊಂದುವಂತೆ ಮ್ಯಾಚ್ ಟೆಸ್ಟ್ ಮಾಡಲಾಗುತ್ತದೆ. ಜೊತೆಗೆ ಔಷಧಿಗಳನ್ನು ತೆಗೆದುಕೊಳ್ಳಬೇಕಾಗುತ್ತದೆ ಹಾಗೂ ಕೆಲವು ಮುಂಜಾಗ್ರತೆಗಳನ್ನು ಸಹ ತೆಗೆದುಕೊಳ್ಳಬೇಕಾಗುತ್ತದೆ. ಕಿಡ್ನಿ ಕಸಿ ಮಾಡಿದರೆ ಆ ವ್ಯಕ್ತಿ 20 ರಿಂದ 25 ವರ್ಷ ಆರೋಗ್ಯವಾಗಿರುತ್ತಾನೆ. ಆ ವ್ಯಕ್ತಿಗೆ ಡಯಾಲಿಸಿಸ್ ಇದ್ದರೆ ಆ ಕಿಡ್ನಿಯ ಆರೋಗ್ಯ 5 ವರ್ಷಗಳ ತನಕ ಚೆನ್ನಾಗಿ ಇರುತ್ತದೆ ಎಂದು ತಿಳಿಸಿದರು.
ನಮ್ಮ ದೇಶದಲ್ಲಿ ಅಂಗಾಂಗ ದಾನ ಮಾಡುವ ಸಂಖ್ಯೆ ಬಹಳ ಕಡಿಮೆ ಇದೆ. ದೇಹದ ಅಂಗಾಂಗಗಳು ಮಣ್ಣಿನಲ್ಲಿ ಮಣ್ಣಾಗುವ ಬದಲು ಅಂಗಾಂಗ ಅವಶ್ಯಕವಾಗಿರುವ ಇನ್ನೊಬ್ಬ ವ್ಯಕ್ತಿಗೆ ನೀಡಿದರೆ ಅವರ ಜೀವನ ಬೆಳಕಾಗುತ್ತದೆ. ಒಬ್ಬ ಅಂಗಾಂಗ ದಾನಿ 8 ಜನರ ಜೀವವನ್ನು ಕಪಾಡಬಹುದು. ಹಾಗಾಗಿ ಅಂಗಾಂಗ ದಾನ ಮಾಡಿ ಮತ್ತೊಬ್ಬರ ಬಾಳಿಗೆ ಬೆಳಕಾಗಿ ಎಂದು ಅಪೋಲೋ ಆಸ್ಪತ್ರೆಯ ವೈದ್ಯ ಪ್ರವೀಣ್ ಚಂದ್ರಶೇಖರ್ ಮನವಿ ಮಾಡಿದ್ದಾರೆ.