ಮೈಸೂರು: ಆಕ್ಸಿಜನ್ ಕೊರತೆಯಿಂದ ರೋಗಿಗಳು ಹಾಗೂ ಸಾರ್ವಜನಿಕರ ಆಕ್ರೋಶಕ್ಕೆ ಒಳಗಾಗಿದ್ದ ಕೆ.ಆರ್. ಆಸ್ಪತ್ರೆ ಮೈಸೂರಿಗರಿಗೆ ಗುಡ್ ನ್ಯೂಸ್ ನೀಡಿದೆ. ಆಸ್ಪತ್ರೆಯ ಆವರಣದಲ್ಲಿಯೇ 12 ಸಾವಿರ ಲೀಟರ್ ಲಿಕ್ವಿಡ್ ಮೆಡಿಕಲ್ ಆಕ್ಸಿಜನ್ ಪ್ಲಾಂಟ್ ಸ್ಥಾಪನೆ ಮಾಡಲಾಗಿದೆ.
ಈ ಮೂಲಕ ಉಸಿರಾಟದ ಸಮಸ್ಯೆಯಿಂದ ಆಸ್ಪತ್ರೆಗೆ ದಾಖಲಾಗುತ್ತಿದ್ದ ರೋಗಿಗಳ ಚಿಕಿತ್ಸಗೆ ನೆರವಾಗಲು ಕ್ರಮ ಕೈಗೊಂಡಿದೆ. ಅಲ್ಲದೆ ಆಕ್ಸಿಜನ್ಗಾಗಿ ಖಾಸಗಿ ಆಸ್ಪತ್ರೆಗೆ ತೆರಳುವುದನ್ನು ತಪ್ಪಿಸಿದಂತಾಗಿದೆ.
ಕೆ.ಆರ್. ಆಸ್ಪತ್ರೆ ಆವರಣದಲ್ಲಿ ಲಿಕ್ವಿಡ್ ಮೆಡಿಕಲ್ ಆಕ್ಸಿಜನ್ ಪ್ಲಾಂಟ್ ಸ್ಥಾಪನೆ ಕೆಲವೇ ದಿನಗಳಲ್ಲಿ ಲಿಕ್ವಿಡ್ ಮೆಡಿಕಲ್ ಆಕ್ಸಿಜನ್ ಪ್ಲಾಂಟ್ ಸೇವೆಗೆ ಲಭ್ಯವಾಗಲಿದೆ. ಉಸಿರಾಟದ ಸಮಸ್ಯೆ ಎದುರಿಸುವ ಸುಮಾರು 500 ರೋಗಿಗಳಿಗೆ ಒಂದೇ ಬಾರಿಗೆ ಆಕ್ಸಿಜನ್ ಪೂರೈಸುವ ಸಾಮರ್ಥ್ಯ ಈ ಪ್ಲಾಂಟ್ ಹೊಂದಿದೆ. ಸುಮಾರು 10.5 ಕೋಟಿ ವೆಚ್ಚದಲ್ಲಿ ಘಟಕ ನಿರ್ಮಾಣವಾಗಿದ್ದು, ಒಂದು ಬಾರಿ ಸಂಗ್ರಹವಾದ ಲಿಕ್ವಿಡ್ ಮೆಡಿಕಲ್ ಆಕ್ಸಿಜನ್ 950 ಹಾಸಿಗೆಗಳಿಗೆ ಪೂರೈಕೆಯಾಗಲಿದೆ.
ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದಂತೆ ಆಕ್ಸಿಜನ್ ಕೊರತೆ ಹೆಚ್ಚಾಗಿತ್ತು. ಕೆ.ಆರ್. ಆಸ್ಪತ್ರೆಯಲ್ಲಿ ಇದುವರೆಗೂ 100ರಿಂದ 150 ರೋಗಿಗಳಿಗೆ ಮಾತ್ರ ಆಕ್ಸಿಜನ್ ಪೂರೈಸುವ ವ್ಯವಸ್ಥೆ ಇತ್ತು. ಇದರಿಂದಾಗಿ ಖಾಸಗಿ ಆಸ್ಪತ್ರೆಗಳ ಮೊರೆ ಹೋಗುವ ಅನಿವಾರ್ಯತೆ ಎದುರಾಗುತ್ತಿತ್ತು.