ಮೈಸೂರು: ಮನೆ ಕಟ್ಟಬೇಕೆಂದರೆ ಸಿಮೆಂಟ್, ಕಬ್ಬಿಣ, ಇಟ್ಟಿಗೆ, ಮರಳು, ಕಲ್ಲು ಇತ್ಯಾದಿ ವಸ್ತುಗಳನ್ನು ಬಳಸುವುದು ಸಾಮಾನ್ಯ. ಆದರೆ, ಹಳೇ ಕಾಲದಲ್ಲಿ ಮಣ್ಣಿನಿಂದಲೇ ಗಟ್ಟಿಮುಟ್ಟಾದ ಮನೆಗಳನ್ನು ನಿರ್ಮಿಸುತ್ತಿದ್ದರು. ಅದರಂತೆ ಇದೀಗ ಮೈಸೂರಿನ ಕಟ್ಟಡ ನಿರ್ಮಾಣ ಸಂಸ್ಥೆಯೊಂದು ಹಳೇ ಕಾಲದ ಮಣ್ಣಿನ ಮನೆಯ ಪರಿಕಲ್ಪನೆಯಲ್ಲಿ ಕಡಿಮೆ ವೆಚ್ಚದಲ್ಲಿ ಪರಿಸರ ಸ್ನೇಹಿ ಮಣ್ಣಿನ ಮನೆಗಳನ್ನು ನಿರ್ಮಾಣ ಮಾಡಬಹುದು ಎಂಬುದನ್ನು ತೋರಿಸಿಕೊಟ್ಟಿದೆ.
ಹಿಂದೆಲ್ಲಾ ಮಣ್ಣಿನಿಂದ ಗಟ್ಟಿಮುಟ್ಟಾದ ಮನೆಗಳನ್ನು ಕಟ್ಟುತ್ತಿದ್ದರು. ಅವು ಅನೇಕ ವರ್ಷಗಳ ಕಾಲ ಬಾಳಿಕೆ ಬರುತ್ತಿತ್ತು. ಆಧುನಿಕತೆ ಬೆಳೆದಂತೆ ಸಿಮೆಂಟ್ ಆವಿಷ್ಕಾರವಾಗಿ ಕಟ್ಟಡ ನಿರ್ಮಾಣಕ್ಕೆ ಸಿಮೆಂಟ್ ಅನ್ನು ಬಳಕೆ ಮಾಡಲು ಪ್ರಾರಂಭಿಸಿದರು. ಇತ್ತೀಚೆಗೆ ಮಣ್ಣನ್ನು ಬಳಸಿ ಯಾರೂ ಕೂಡ ಮನೆ ಕಟ್ಟುವುದಿಲ್ಲ. ಆದರೆ, ಮೈಸೂರಿನ ಆರ್-ಲೀಫ್ ಎಂಬ ಕಟ್ಟಡ ನಿರ್ಮಾಣ ಸಂಸ್ಥೆಯು ಕಡಿಮೆ ವೆಚ್ಚದಲ್ಲಿ ಪರಿಸರ ಸ್ನೇಹಿ ಮಣ್ಣಿನ ಮನೆಗಳನ್ನು ನಿರ್ಮಿಸಬಹುದೆಂದು ತೋರಿಸಿಕೊಟ್ಟಿದೆ.
ಈಗಾಗಲೇ ಈ ಸಂಸ್ಥೆಯು ಮೈಸೂರಿನಲ್ಲಿ ಸುಮಾರು 15ಕ್ಕೂ ಹೆಚ್ಚಿನ ಮಣ್ಣಿನ ಮನೆಗಳನ್ನು ನಿರ್ಮಾಣ ಮಾಡಿದೆ. ಮಣ್ಣಿನ ಮನೆ ನಿರ್ಮಾಣವು ಸಾಮಾನ್ಯ ಮನೆಗಳ ನಿರ್ಮಾಣಕ್ಕಿಂತ ಶೇ.10ರಿಂದ ಶೇ.30ರಷ್ಟು ಕಡಿಮೆ ವೆಚ್ಚದಲ್ಲಿ ನಿರ್ಮಾಣ ಮಾಡಬಹುದು. ಮನೆಗೆ ಮಂಗಳೂರು ಹಂಚುಗಳನ್ನು ಹಾಕಲಾಗಿದ್ದು, ಇದರ ಜೊತೆಗೆ ಕಾಂಕ್ರೀಟ್ ತಾರಸಿಯನ್ನು ಹಾಕಲಾಗುತ್ತದೆ.