ಕರ್ನಾಟಕ

karnataka

ETV Bharat / state

ಸಸ್ಯಕಾಶಿಯಾದ ಕಾಲೇಜು ಕ್ಯಾಂಪಸ್‌; ಇದು ಕನ್ನಡ ಉಪನ್ಯಾಸಕನ ಪರಿಸರ ಕಾಳಜಿ

ಉಪನ್ಯಾಸಕರ ಪರಿಸರ ಕಾಳಜಿಯ ಪರಿಣಾಮ ಮೈಸೂರಿನ ಕಾಲೇಜೊಂದರ ಆವರಣ ಸಸ್ಯಕಾಶಿಯಂತೆ ಕಂಗೊಳಿಸುತ್ತಿದೆ.

Lecturers Environmental Concerns  Vegetation College Premises  Vegetation College Premises in Mysore  ಉಪನ್ಯಾಸಕನ ಪರಿಸರ ಕಾಳಜಿ  ಸಸ್ಯಕಾಶಿಯಾದ ಕಾಲೇಜಿನ ಆವರಣ  ಕನ್ನಡ ಲಕ್ಚರ್​ ಕಾರ್ಯಕ್ಕೆ ಫಿದಾ ಆದ ಗ್ರಾಮಸ್ಥರು  ಕಾಲೇಜಿನ ಆವರಣ ಸಸ್ಯಕಾಶಿ  ಬರಡು ಭೂಮಿಯಲ್ಲಿ ಮಲೆನಾಡು ವಾತಾವರಣ ಸೃಷ್ಟಿ  ಕನ್ನಡ ಉಪನ್ಯಾಸಕರ ಕಾರ್ಯವೈಕರಿ  ಗ್ರಾಮಸ್ಥರು ಮತ್ತು ವಿದ್ಯಾರ್ಥಿಗಳು ಫಿದಾ
ಕನ್ನಡ ಲಕ್ಚರ್​ ಕಾರ್ಯಕ್ಕೆ ಫಿದಾ ಆದ ಗ್ರಾಮಸ್ಥರು

By ETV Bharat Karnataka Team

Published : Sep 8, 2023, 7:29 AM IST

Updated : Sep 8, 2023, 8:39 AM IST

ಕನ್ನಡ ಉಪನ್ಯಾಸಕನ ಪರಿಸರ ಕಾಳಜಿ

ಮೈಸೂರು:ಬರಡು ಭೂಮಿಯಲ್ಲಿ ಮಲೆನಾಡಿನ ವಾತಾವರಣ ಸೃಷ್ಟಿಸಿದ ಕನ್ನಡ ಉಪನ್ಯಾಸಕರೊಬ್ಬರ ಕಾರ್ಯವೈಖರಿಗೆ ಇಲ್ಲಿನ ದೊಡ್ಡ ಕವಲಂದೆ ಗ್ರಾಮಸ್ಥರು ಮತ್ತು ವಿದ್ಯಾರ್ಥಿಗಳು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ವಿದ್ಯಾರ್ಥಿಗಳ ಪ್ರಗತಿಗೆ ಕಾಲೇಜಿನ ಉತ್ತಮ ವಾತಾವರಣವೂ ಪೂರಕ ಎಂಬ ಮಾತಿಗೆ ನಂಜನಗೂಡು ತಾಲೂಕಿನ ದೊಡ್ಡಕವಲಂದೆ ಗ್ರಾಮದ ಸರ್ಕಾರಿ ಪದವಿ ಪೂರ್ವ ಕಾಲೇಜು ಸಾಕ್ಷಿಯಾಗಿದೆ.

ಬರಡು ಬಯಲಾಗಿದ್ದ ಈ ಕಾಲೇಜು ಆವರಣವೀಗ ಸಸ್ಯಕಾಶಿಯಾಗಿ ರೂಪುಗೊಂಡಿದೆ. ಕನ್ನಡ ಉಪನ್ಯಾಸಕ ಹಾಗೂ ಎನ್.ಎಸ್.ಎಸ್ ಅಧಿಕಾರಿಯೂ ಆಗಿರುವ ವೆಂಕಟರಮಣ ಮತ್ತು ವಿದ್ಯಾರ್ಥಿಗಳು, ಪ್ರಾಂಶುಪಾಲ ಡಾ.ಟಿ.ಆರ್ ಸಿದ್ದರಾಜು ಹಾಗು ಸಹೋದ್ಯೋಗಿಗಳ ಸಹಕಾರದಿಂದ ಕಾಲೇಜು ಕ್ಯಾಂಪಸ್‌ ಹಸಿರಾಗಿದೆ.

ವಿದ್ಯಾರ್ಥಿಗಳ ಪಠ್ಯೇತರ ಚಟುವಟಿಕೆಗಳ ಬೆಳವಣಿಗೆಗಾಗಿ ಮೀಸಲಾಗಿದ್ದ ಜಾಗ ಯಾವುದಕ್ಕೂ ಪ್ರಯೋಜನವಿಲ್ಲದಂತಾಗಿತ್ತು. ಆಟದ ಮೈದಾನ ಹೊರತುಪಡಿಸಿ ಉಳಿದ ಜಾಗವನ್ನು ಹಸಿರೀಕರಣ ಮಾಡಲು ವೆಂಕಟರಮಣ ನಿರ್ಧರಿಸಿ ಕಾರ್ಯೋನ್ಮುಖರಾಗಿದ್ದರು. ಇದಕ್ಕಾಗಿ ಸಹೋದ್ಯೋಗಿಗಳ ಅಪಹಾಸ್ಯವನ್ನೂ ಅವರು ಎದುರಿಸಿದ್ದರಂತೆ.

ಆದರೆ, ಇದನ್ನು ಸವಾಲಾಗಿ ಸ್ವೀಕರಿಸಿದ ವೆಂಕಟರಮಣ, ವಿದ್ಯಾರ್ಥಿಗಳ ನೆರವು ಹಾಗೂ ಪ್ರಾಂಶುಪಾಲರ ಮಾರ್ಗದರ್ಶನ ಪಡೆದು ಕಾಲೇಜು ಆವರಣವನ್ನು ಹಸಿರುವಲಯವನ್ನಾಗಿ ಪರಿವರ್ತಿಸಲು ಪಣತೊಟ್ಟರು. ಕೆಲವು ವರ್ಷಗಳ ಕಠಿಣ ಪರಿಶ್ರಮವೀಗ ಫಲ ಕೊಟ್ಟಿದೆ. ಕನ್ನಡ ಪಾಠದಲ್ಲಿ ವಿದ್ಯಾರ್ಥಿಗಳ ಮನಸ್ಸು ಗೆದ್ದ ಉಪನ್ಯಾಸಕ, ಕಾಲೇಜು ಆವರಣದಲ್ಲಿ ಉತ್ತಮ ವಾತಾವರಣ ನಿರ್ಮಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಈ ಕಾರ್ಯಕ್ಕಾಗಿ ವೆಂಕಟರಮಣ ಸ್ವಂತ ಹಣ ವಿನಿಯೋಗಿಸಿದ್ದಾರೆ. ಕಾಲೇಜು ಅಥವಾ ದಾನಿಗಳಿಂದ ಯಾವುದೇ ಹಣಕಾಸು ನೆರವು ಪಡೆದಿಲ್ಲ. ಸುಮಾರು ಎರಡೆಕರೆ ನೆಲದಲ್ಲಿ ವಿವಿಧ ಜಾತಿಯ ಗಿಡಗಳನ್ನು ನೆಟ್ಟಿದ್ದಾರೆ. ಪ್ರಾಣಿ, ಪಕ್ಷಿಗಳಿಗೂ ಅನುಕೂಲವಾಗುವಂತೆ ಹಾಗೂ ವಿದ್ಯಾರ್ಥಿಗಳು ಕುಳಿತುಕೊಳ್ಳಲು ಆಸನಗಳ ವ್ಯವಸ್ಥೆ ಕಲ್ಪಿಸಿದ್ದಾರೆ. ಇದು ಸುಮಾರು 6 ವರ್ಷಗಳ ಪರಿಶ್ರಮ. ಹಸಿರುವಲಯವಾಗಿ ಬದಲಾಗಿರುವ ಕಾಲೇಜು ಆವರಣವನ್ನು ಇದೀಗ ವಿದ್ಯಾರ್ಥಿಗಳು ಖುಷಿಖುಷಿಯಿಂದ ತಮ್ಮ ಪಠ್ಯೇತರ ಚಟುವಟಿಕೆಗಳಿಗೂ ಬಳಸಿಕೊಳ್ಳುತ್ತಿದ್ದಾರೆ.

"ಉಪನ್ಯಾಸಕರಾದ ನಾವು ಪರಿಸರದ ಬಗ್ಗೆ ಪಾಠ ಮಾಡುತ್ತೇವೆ ಅಷ್ಟೇ. ಆದ್ರೆ ಮಕ್ಕಳಿಗೆ ಪರಿಸರ ಹೇಗಿರಬೇಕೆಂಬುದನ್ನು ತೋರಿಸುವ ಪ್ರಯತ್ನ ಮಾಡುವುದಿಲ್ಲ. ನಾವು ಯಾರೋ ಒಬ್ಬರ ಬಗ್ಗೆ ಉದಾಹರಣೆ ಕೊಟ್ಟು ಪರಿಸರದ ಬಗ್ಗೆ ಪಾಠ ಮಾಡುತ್ತೇವೆ. ಈ ರೀತಿ ಆಗಬಾರದು. ನಾವೇ ಗಿಡಗಳನ್ನು ನೆಟ್ಟು, ಮಕ್ಕಳಿಗೆ ಮಾದರಿಯಾಬೇಕು ಎಂಬುದು ನನ್ನ ಅಭಿಪ್ರಾಯ" ಎಂದು ಕನ್ನಡ ಉಪನ್ಯಾಸಕ ವೆಂಕಟರಮಣ ಹೇಳಿದರು.

"ನಾನು 2017ರಲ್ಲಿ ಈ ಸರ್ಕಾರಿ ಕಾಲೇಜಿ​ಗೆ ವರ್ಗಾವಣೆ ಆಗಿ ಬಂದೆ. ಆಗ ಶಾಸ್ತ್ರಕ್ಕೂ ಸಹ ಒಂದು ಮರ, ಗಿಡ ಇರಲಿಲ್ಲ. ಈ ಪರಿಸ್ಥಿತಿ ಕಂಡು ಕೂಡಲೇ ಕಾರ್ಯಪ್ರವೃತ್ತನಾದೆ. ಆಗಿನಿಂದಲೂ ಇಲ್ಲಿ ಗಿಡ, ಮರಗಳನ್ನು ಬೆಳೆಸುವ ಹವ್ಯಾಸ ಬೆಳೆಸಿಕೊಂಡು ಬಂದಿದ್ದೇನೆ" ಎಂದು ವೆಂಕಟರಮಣ ತಿಳಿಸಿದರು.

ಇದನ್ನೂ ಓದಿ:ಅರುಣಾಚಲ ಪ್ರದೇಶದಲ್ಲಿ ಪತ್ತೆಯಾಯ್ತು ಹೊಸ ಜಾತಿಯ ಮರ ; ಹೆಚ್ಚಿದ ಕುತೂಹಲ

Last Updated : Sep 8, 2023, 8:39 AM IST

ABOUT THE AUTHOR

...view details