ಮೈಸೂರು:ಡಿಸೆಂಬರ್ 31ರ ರಾತ್ರಿ 9 ಗಂಟೆಯಿಂದ ಜನವರಿ 1ರ ಬೆಳಿಗ್ಗೆ 5 ಗಂಟೆಯವರೆಗೆ ಚಾಮುಂಡಿಬೆಟ್ಟಕ್ಕೆ ಬೆಟ್ಟದ ನಿವಾಸಿಗಳನ್ನು ಹೊರತುಪಡಿಸಿ, ಇತರೆ ಸಾರ್ವಜನಿಕರು ಹಾಗೂ ವಾಹನಗಳಿಗೆ ಪ್ರವೇಶ ನಿರ್ಬಂಧಿಸಿ ಪೊಲೀಸ್ ಆಯುಕ್ತ ಬಿ.ರಮೇಶ್ ಆದೇಶಿಸಿದ್ದಾರೆ.
ಮೈಸೂರು ನಗರದ ಕೃಷ್ಣರಾಜ ಪೊಲೀಸ್ ಠಾಣಾ ವ್ಯಾಪ್ತಿಯ ಚಾಮುಂಡಿ ಬೆಟ್ಟದ ಮೇಲಿನ ಶ್ರೀ ಚಾಮುಂಡೇಶ್ವರಿ ದೇವಸ್ಥಾನವು ಭಕ್ತಿಪ್ರಧಾನ ಕೇಂದ್ರವಾಗಿದೆ. ಇಲ್ಲಿ ದೇವರ ದರ್ಶನ ಪಡೆಯಲು ಪ್ರತಿನಿತ್ಯ ಸಾವಿರಾರು ಭಕ್ತಾದಿಗಳು ಆಗಮಿಸುತ್ತಾರೆ. ಪುರಾಣ ಪ್ರಸಿದ್ಧವಾಗಿರುವ ಚಾಮುಂಡಿ ಬೆಟ್ಟವು ಮೈಸೂರಿನ ಪ್ರತಿಷ್ಠೆ ಮತ್ತು ಸೌಂದರ್ಯ ತಾಣವಾಗಿದ್ದು, ಮೀಸಲು ಅರಣ್ಯ ಪ್ರದೇಶವೂ ಹೌದು.
ಹೊಸ ವರ್ಷಾಚರಣೆಯ ಸಂದರ್ಭದಲ್ಲಿ ಸಾವಿರಾರು ಜನರು ಚಾಮುಂಡಿ ಬೆಟ್ಟಕ್ಕೆ ಹೊಸ ವರ್ಷದ ಹಿಂದಿನ ದಿನ ರಾತ್ರಿ ಹೋಗಿ ಅಲ್ಲಿನ ರಸ್ತೆಗಳಲ್ಲಿ ಮದ್ಯಪಾನ ಮಾಡಿ ಕೂಗಾಡುತ್ತ ಬೆಟ್ಟದ ರಸ್ತೆಗಳಲ್ಲಿ ಸಂಚರಿಸಿ ಅಪಘಾತ ಮಾಡಿಕೊಳ್ಳುವ ಸಾಧ್ಯತೆಗಳಿವೆ. ಚಾಮುಂಡಿ ಬೆಟ್ಟದಲ್ಲಿರುವ ವನ್ಯಜೀವಿಗಳಿಗೆ ತೊಂದರೆ ಉಂಟಾಗುವ ಸಂಭವವೂ ಹೆಚ್ಚಿದೆ.
ಈ ನಿಟ್ಟಿನಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಡಿ.31 ರ ರಾತ್ರಿ 9 ರಿಂದ ಜ. 1ರ ಬೆಳಿಗ್ಗೆ 5ರವರೆಗೆ ಚಾಮುಂಡಿ ಬೆಟ್ಟಕ್ಕೆ, ಬೆಟ್ಟದ ನಿವಾಸಿಗಳನ್ನು ಹೊರತುಪಡಿಸಿ ಇತರೆ ಸಾರ್ವಜನಿಕರು ಹಾಗೂ ವಾಹನಗಳನ್ನು ನಿಷೇಧಿಸಿ ಸಿಆರ್‌ಪಿಸಿ ಕಲಂ 144 ರೀತ್ಯ ನಿಷೇಧಾಜ್ಞೆ ಜಾರಿಗೊಳಿಸಿ ಆದೇಶ ಹೊರಡಿಸಲಾಗಿದೆ.
ಇದನ್ನೂ ಓದಿ:ಚಾಮುಂಡಿ ಬೆಟ್ಟಕ್ಕೆ ಬರುವ ಭಕ್ತರ ಡ್ರೆಸ್‌ಕೋಡ್ ಅಭಿಯಾನಕ್ಕೆ ಸಂಪೂರ್ಣ ಬೆಂಬಲ: ಪ್ರತಾಪ್ ಸಿಂಹ