ಮೈಸೂರು :ಮಹಿಷಾ ದಸರಾ ಹಾಗೂ ಚಾಮುಂಡಿ ಬೆಟ್ಟ ಚಲೋ ಚಳುವಳಿ ಕಾರ್ಯಕ್ರಮಕ್ಕೆ ಅನುಮತಿ ನಿರಾಕರಣೆಯ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಇಂದು ಮಧ್ಯರಾತ್ರಿಯಿಂದ ಶನಿವಾರ ಬೆಳಗಿನ ಜಾವ 6 ಗಂಟೆಯವರೆಗೆ ಚಾಮುಂಡಿ ಬೆಟ್ಟ ಹಾಗೂ ಮೈಸೂರು ನಗರ ವ್ಯಾಪ್ತಿಯಲ್ಲಿ 144ನೇ ಸೆಕ್ಷನ್ ಅನ್ವಯ ನಿಷೇಧಾಜ್ಞೆ ಜಾರಿ ಮಾಡಲಾಗಿದೆ ಎಂದು ನಗರ ಪೊಲೀಸ್ ಕಮಿಷನರ್ ರಮೇಶ್ ಬಾನೋತ್ ಹೇಳಿದರು.
ತಮ್ಮ ಕಚೇರಿಯಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಮಹಿಷ ದಸರಾ ಆಚರಣೆ ಹಾಗೂ ಚಾಮುಂಡಿ ಬೆಟ್ಟ ಚಲೋ ಕಾರ್ಯಕ್ರಮಕ್ಕೆ ಅನುಮತಿ ಕೋರಿ ಆಯೋಜಕರು ಪತ್ರ ಸಲ್ಲಿಸಿದ್ದರು. ಆದರೆ ನಾಡಹಬ್ಬ ದಸರಾ ಮಹೋತ್ಸವಕ್ಕೆ ದೇಶ, ವಿದೇಶಗಳಿಂದ ಲಕ್ಷಾಂತರ ಪ್ರವಾಸಿಗರು ಆಗಮಿಸುವ ಹಿನ್ನೆಲೆಯಲ್ಲಿ ಕಾನೂನು ಮತ್ತು ಸುವ್ಯವಸ್ಥೆ ದೃಷ್ಟಿಯಿಂದ ಮಹಿಷ ದಸರಾ ಆಚರಣೆ ಹಾಗೂ ಚಾಮುಂಡಿ ಚಲೋ ಜಾಥಕ್ಕೆ ಅನುಮತಿ ನಿರಾಕರಿಸಲಾಗಿದೆ. ಮುಂಜಾಗ್ರತಾ ಕ್ರಮವಾಗಿ 12/10/2023 ರಿಂದ 14/10/2023 ರವರೆಗೆ ಚಾಮುಂಡಿ ಬೆಟ್ಟ ಹಾಗೂ ಮೈಸೂರು ನಗರ ವ್ಯಾಪ್ತಿಯಲ್ಲಿ 30 ಗಂಟೆಗಳ ಕಾಲದ ನಿಷೇಧಾಜ್ಞೆ ಜಾರಿ ಮಾಡಲಾಗಿದೆ. ನಿಷೇಧಾಜ್ಞೆ ಉಲ್ಲಂಘನೆ ಮಾಡಿದರೆ, ಕಾನೂನು ರೀತಿಯ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.
ಮಹಿಷ ಉತ್ಸವಕ್ಕೆ ಷರತ್ತು ಬದ್ಧ ಅನುಮತಿ:ಮಹಿಷ ದಸರಾ ಸಮಿತಿಯವರು ನಗರ ಪೊಲೀಸ್ ಕಮಿಷನರ್ಗೆ ಮತ್ತೊಂದು ಅನುಮತಿ ಕೋರಿ ಪತ್ರ ನೀಡಿದ್ದು, ಮೈಸೂರು ನಗರದ ಟೌನ್ಹಾಲ್ ಬಳಿ ಕಾರ್ಯಕ್ರಮ ನಡೆಸಲು ಅನುಮತಿ ನೀಡುವಂತೆ ಕೋರಿಕೊಂಡಿದ್ದಾರೆ. ಇದರನ್ವಯ ಟೌನ್ಹಾಲ್ ಬಳಿ ಮಹಿಷಾ ಉತ್ಸವ ಸಮಿತಿಗೆ ಕಾರ್ಯಕ್ರಮ ನಡೆಸಲು ಷರತ್ತುಬದ್ಧ ಅನುಮತಿ ನೀಡಲಾಗಿದೆ. ಉತ್ಸವದ ಹೆಸರಿನಲ್ಲಿ ಮೆರವಣಿಗೆ, ರ‍್ಯಾಲಿ ನಡೆಸಬಾರದು, ಘೋಷಣೆ ಕೂಗಬಾರದು. ಫ್ಲೆಕ್ಸ್ , ಬ್ಯಾನರ್ಗಳು, ಧ್ವನಿವರ್ಧಕ ಬಳಸುವಂತಿಲ್ಲ. ಮೂರ್ತಿ ಮೆರವಣಿಗೆ ಹಾಗೂ ಕರಪತ್ರ ಹಂಚುವಂತಿಲ್ಲ. ಒಂದು ವೇಳೆ ಷರತ್ತುಗಳನ್ನು ಉಲ್ಲಂಘಿಸಿ ಅಹಿತಕರ ಘಟನೆಗಳು ನಡೆದರೆ ಆಯೋಜಕರೇ ನೇರ ಹೊಣೆ ಎಂದು ತಿಳಿಸಲಾಗಿದೆ ಎಂದರು.