ಮೈಸೂರು :ಜಂಬೂಸವಾರಿ ಮೆರವಣಿಗೆಯಲ್ಲಿ ಭಾಗವಹಿಸುವ ಆನೆಗಳಿಗೆ ಹಾಗೂ ಅಶ್ವಪಡೆಗೆ ಕುಶಾಲತೋಪು ಶಬ್ಧಕ್ಕೆ ಹೆದರದ ರೀತಿಯಲ್ಲಿ ಅರಮನೆ ಮೈದಾನದಲ್ಲಿ 3ನೇ ಬಾರಿ ಫಿರಂಗಿ ತಾಲೀಮನ್ನು ನಡೆಸಲಾಯಿತು. ಈ ವೇಳೆ ಶಬ್ಧಕ್ಕೆ ಲಕ್ಷ್ಮಿ ಹಾಗೂ ಧನಂಜಯ ಆನೆಗಳು ಸ್ವಲ್ಪ ಬೆದರಿದವು. ಅಶ್ವಪಡೆ ಸಹ ಬೆದರಿದ್ದು ಕಂಡು ಬಂತು.
ಈ ಬಗ್ಗೆ ಡಿಸಿಎಫ್ ಕರಿಕಾಳನ್ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದು, ಜಂಬೂಸವಾರಿ ಮೆರವಣಿಗೆಗೆ ಅಂಬಾರಿ ಆನೆ, ಕುಮ್ಕಿ ಆನೆಗಳು, ನೌಪತ್ ಆನೆ, ನಿಶಾನೆ ಆನೆ ಸೇರಿ ಒಟ್ಟು 5 ಆನೆಗಳು ಸಾಕು. ಆದರೆ, ಇಲ್ಲಿಗೆ ಬಂದ ನಂತರ ಆನೆಗಳ ಆರೋಗ್ಯದಲ್ಲಿ ವ್ಯತ್ಯಾಸಗಳಾಗುತ್ತವೆ. ಆದ್ದರಿಂದ 8 ಆನೆಗಳನ್ನು ಕರೆತರಲಾಗಿದೆ ಎಂದರು.
ವಿಕ್ರಮ ಆನೆ ಮಸ್ತಿಯಲ್ಲಿದೆ. ಈ ಮಸ್ತಿ ನಾಲ್ಕು ತಿಂಗಳು ಇರಲಿದೆ. ಆದ್ದರಿಂದ ಈ ಆನೆಯನ್ನು ಮೆರವಣಿಗೆಯಿಂದ ದೂರ ಇಟ್ಟಿದ್ದೇವೆ. ಅಭಿಮನ್ಯು ಜಂಬೂ ಸವಾರಿ ಹೊರಲಿದೆ. ಕುಮ್ಕಿ ಆನೆಗಳಾಗಿ ಚೈತ್ರಾ ಮತ್ತು ಕಾವೇರಿ ಬಲ ಮತ್ತು ಎಡ ಭಾಗದಲ್ಲಿರಲಿವೆ. ಧನಂಜಯ, ಗೋಪಾಲಸ್ವಾಮಿ ಹಾಗೂ ಅಶ್ವತ್ಥಾಮ ನೌಪತ್ ಹಾಗೂ ನಿಶಾನೆ ಆನೆಗಳಾಗಿವೆ. ಅದರಲ್ಲಿ ಎರಡು ಆನೆಗಳನ್ನು ಬಳಸುತ್ತೇವೆ ಎಂದರು.