ಮೈಸೂರು:ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಗಾಯಗೊಂಡಿದ್ದ ಆನೆ ಮರಿಗೆ ಚಿಕಿತ್ಸೆ ನೀಡಿ ತಾಯಿ ಜೊತೆ ಕಾಡಿಗೆ ಬಿಡಲಾಗಿದೆ. ಆದರೆ ತಾಯಿಯೊಂದಿಗಿದ್ದ ಆನೆ ಮರಿ ಕಳೆದ 3 ದಿನಗಳಿಂದ ಅರಣ್ಯ ಇಲಾಖೆ ಸಿಬ್ಬಂದಿಗೆ ಕಾಣಿಸುತ್ತಿಲ್ಲ.
ಎಐಸಿಸಿ ನಾಯಕ ರಾಹುಲ್ ಗಾಂಧಿ ಭಾರತ್ ಜೋಡೋ ಯಾತ್ರೆ ವೇಳೆ ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಸಫಾರಿಗೆ ತೆರಳಿದ್ದರು. ಈ ವೇಳೆ ಗಾಯಗೊಂಡಿದ್ದ ಆನೆ ಮರಿಯೊಂದು ಅವರ ಕಣ್ಣಿಗೆ ಬಿದ್ದಿತ್ತು. ಬಳಿಕ ಅವರು ತಾಯಿ ಆನೆ ಮತ್ತು ಅದರ ಗಾಯಗೊಂಡ ಮರಿಗೆ ಸೂಕ್ತ ಚಿಕಿತ್ಸೆ ನೀಡುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಪತ್ರ ಬರೆದಿದ್ದರು.
ಆನೆ ಮರಿಗೆ ಚಿಕಿತ್ಸೆ ನೀಡುತ್ತಿರುವುದು ಈ ಸಂಬಂಧ ರಾಹುಲ್ ಮನವಿಗೆ ಪ್ರತಿಕ್ರಿಯೆ ನೀಡಿದ ಸಿಎಂ ಬೊಮ್ಮಾಯಿ ಆನೆ ಮತ್ತು ಅದರ ಮರಿಗೆ ಸಂಪೂರ್ಣ ಕಾಳಜಿ ಮತ್ತು ಚಿಕಿತ್ಸೆ ನೀಡಲಾಗುವುದು ಎಂದಿದ್ದರು. ಅಲ್ಲದೆ, ನಾಗರಹೊಳೆಯ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಲಾಗಿತ್ತು. ಈ ಮೇರೆಗೆ ಆನೆ ಹಾಗೂ ಮರಿಯನ್ನು ಪತ್ತೆ ಹಚ್ಚಿ ಚಿಕಿತ್ಸೆ ನೀಡಿದ್ದು, ಆರೋಗ್ಯದಲ್ಲಿ ಸ್ವಲ್ಪಮಟ್ಟಿಗಿನ ಸುಧಾರಣೆ ಕಂಡುಬಂದಿದೆ. ಚಿಕಿತ್ಸೆ ಬಳಿಕ ತಾಯಿ ಮತ್ತು ಮರಿ ಆನೆಯ ಮೇಲೆ ನಿಗಾ ವಹಿಸಲಾಗಿತ್ತು. ಆರೋಗ್ಯ ಸ್ಥಿತಿಯ ಬಗ್ಗೆ ಚಿಕಿತ್ಸೆ ಉಸ್ತುವಾರಿಯನ್ನು ಆರ್ಎಫ್ಒ ಮತ್ತು ಪಶು ವೈದ್ಯರ ತಂಡಕ್ಕೆ ನೀಡಲಾಗಿತ್ತು.
ಆರೋಗ್ಯ ಸುಧಾರಣೆ ಕಂಡ ನಂತರ ಆನೆ ಮರಿ ಬಹಳ ಚಟುವಟಿಕೆಯಿಂದ ಇತ್ತು. ಆನೆ ಮತ್ತು ಅದರ ಮರಿಗೆ ಚಿಕಿತ್ಸೆ ನೀಡಿದ ನಂತರ ಅರಣ್ಯಕ್ಕೆ ಬಿಡಲಾಗಿತ್ತು. ಆದರೆ ಈಗ ಮೂರು ದಿನಗಳಿಂದ ನಾಗರಹೊಳೆ ಅರಣ್ಯ ಪ್ರದೇಶದಲ್ಲಿ ತಾಯಿ ಮತ್ತು ಜೊತೆಗಿದ್ದ ಆನೆ ಮರಿ ಈಗ ಅರಣ್ಯ ಇಲಾಖೆ ಸಿಬ್ಬಂದಿ ಕಣ್ಣಿಗೆ ಕಾಣಿಸುತ್ತಿಲ್ಲ. ಅದನ್ನು ಪತ್ತೆ ಹಚ್ಚಲು ಅರಣ್ಯ ಇಲಾಖೆ ಸಿಬ್ಬಂದಿ ಕಾರ್ಯ ನಿರತರಾಗಿದ್ದಾರೆ ಎಂದು ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದ ಉಪ ಸಂರಕ್ಷಣಾಧಿಕಾರಿ ಹರ್ಷ ಕುಮಾರ ಚಿಕ್ಕನರಗುಂದ ಈಟಿವಿ ಭಾರತಕ್ಕೆ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ:ನಾಗರಹೊಳೆಯಲ್ಲಿ ಗಾಯಗೊಂಡ ಆನೆ ಮರಿ ಕಂಡ ರಾಹುಲ್: ಚಿಕಿತ್ಸೆ ಕೊಡಿಸುವಂತೆ ಸಿಎಂಗೆ ಪತ್ರ