ಮೈಸೂರು: ನಾಗರಹೊಳೆ ರಾಷ್ಟ್ರೀಯ ಉದ್ಯಾನವನದಿಂದ ಆಹಾರ ಅರಸಿ ಹೊರ ಬಂದಿದ್ದ ಕಾಡಾನೆವೊಂದು ಹುಣಸೂರಿನ ಗುರುಪುರ ಟಿಬೆಟ್ ಕ್ಯಾಂಪ್ನಲ್ಲಿ ದಾಂಧಲೆ ನಡೆಸಿದೆ.
ಹುಣಸೂರು ವೀರನಹೊಸಳ್ಳಿ ವಲಯ ವ್ಯಾಪ್ತಿಯ ಸೊಳ್ಳೇಪುರ ಕಡೆಯಿಂದ ಅರಣ್ಯ ದಾಟಿ ಹೊರ ಬಂದಿದ್ದ ಆನೆ, ಗುರುಪುರ ಟಿಬೇಟ್ ಕ್ಯಾಂಪಿನ ಜಮೀನುಗಳಲ್ಲಿ ಬಾಳೆ, ಜೋಳದ ಬೆಳೆಯನ್ನು ತಿಂದು ತುಳಿದು ನಾಶ ಪಡಿಸಿದೆ ಎಂಬ ಆರೋಪ ಕೇಳಿ ಬಂದಿದೆ.
ಕ್ಯಾಂಪಿನೊಳಗೆ ನುಗ್ಗಿದ್ದ ಆನೆಯನ್ನು ಕಂಡು ಆತಂಕಗೊಂಡ ಟಿಬೆಟಿಯನ್ನರು ಕಲ್ಲು ಹೊಡೆದು ಹಿಮ್ಮೆಟ್ಟಿಸಿದ್ದು, ನಂತರ ಅಕ್ಕಪಕ್ಕದವರ ನೆರವಿನೊಂದಿಗೆ ಸಲಗವನ್ನು ಕಾಡಿಗಟ್ಟುವ ವೇಳೆ ಕಾಡಾನೆ ಮನೆಗಳ ಬಳಿ ಧಾವಿಸಿ ಅಲ್ಲಿಯೂ ದಾಂಧಲೆ ನಡೆಸಿದೆ. ಜನರ ಕಲ್ಲಿನ ಹೊಡೆತದಿಂದ ಪಾರಾಗಲು ಪಕ್ಕದಲ್ಲಿದ್ದ ವೀರನಹೊಸಳ್ಳಿ ವಲಯದ ಕುರುಚಲು ಕಾಡು ಸೇರಿಕೊಂಡಿದೆ ಎನ್ನಲಾಗುತ್ತಿದೆ.