ಮೈಸೂರು: ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ಎಲೆಕ್ಟ್ರಾನಿಕ್ ಉಪಕರಣಗಳು ಸುಟ್ಟು ಭಸ್ಮವಾಗಿರುವ ಘಟನೆ ನಂಜನಗೂಡು ನಗರದ 18ನೇ ಕ್ರಾಸ್ ಕಸ್ತೂರಬಾ ಗಾಂಧಿ ಬಾಲಿಕಾ ವಿದ್ಯಾಲಯದಲ್ಲಿ ಗುರುವಾರ ನಡೆದಿದೆ. ದಸರಾ ರಜೆ ಮುಗಿಸಿಕೊಂಡು ಇಂದಿನಿಂದ ಶಾಲೆಗಳು ಪ್ರಾರಂಭವಾಗಿವೆ. ಶಿಕ್ಷಕರು ಶಾಲೆಯ ಕಚೇರಿಯ ಬಾಗಿಲು ತೆರೆದಾಗ ಸುಟ್ಟು ಕರಕಲಾಗಿರುವ ವಾಸನೆ ಬಂದಿದೆ. ಮುಖ್ಯ ಶಿಕ್ಷಕರ ಕಚೇರಿಯಲ್ಲಿದ್ದ ಕಂಪ್ಯೂಟರ್, ಮಾನಿಟರ್, ಪ್ರಿಂಟರ್, ಸ್ಕ್ಯಾನರ್, ಸಿಸಿ ಕ್ಯಾಮರಾ, ಬಿಎಸ್‌ಎನ್‌ಎಲ್ ಫೋನ್ ಸೇರಿದಂತೆ ಹಲವು ದಾಖಲಾತಿಗಳು ಸುಟ್ಟು ಹೋಗಿವೆ.
ಸುಮಾರು 2 ಲಕ್ಷ ರೂ.ಗೂ ಹೆಚ್ಚು ಬೆಳೆಬಾಳುವ ಎಲೆಕ್ಟ್ರಾನಿಕ್ ಉಪಕರಣಗಳು ಸುಟ್ಟು ಕರಕಲಾಗಿದೆ ಎಂದು ತಿಳಿದುಬಂದಿದೆ. ಕಳೆದ ಎರಡು ಮೂರು ದಿನಗಳ ಹಿಂದೆಯೇ ವಿದ್ಯುತ್ ಅವಘಡ ಸಂಭವಿಸಬಹುದು ಎನ್ನಲಾಗಿದೆ. ಇಂದು ಶಾಲೆ ತೆರೆದಾಗ ಘಟನೆ ಬೆಳಕಿಗೆ ಬಂದಿದೆ. ನಂಜನಗೂಡು ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.