ಮೈಸೂರು: ರಾಜ್ಯದಲ್ಲಿ ವಿಧಾನಸಭಾ ಚುನಾವಣೆಗೆ ಇನ್ನೂ ದಿನಾಂಕ ಘೋಷಣೆ ಆಗಿಲ್ಲ. ಆಗಲೇ ಕ್ಷೇತ್ರದಲ್ಲಿ ರಾಜಕೀಯ ಪಕ್ಷಗಳ ಅಭ್ಯರ್ಥಿಗಳು ಮತದಾರರನ್ನು ಸೆಳೆಯಲು ನಾನಾ ರೀತಿಯ ತಂತ್ರಗಳನ್ನು ಬಳಸುತ್ತಿದ್ದಾರೆ. ಮೈಸೂರು ಜಿಲ್ಲೆಯಲ್ಲಿ ತಂದೆಯ ಜೊತೆ ಪುತ್ರರೂ ಅಖಾಡಕ್ಕಿಳಿದಿದ್ದು, ಮತದಾರರನ್ನು ಸೆಳೆಯಲು ಕಸರತ್ತು ನಡೆಸುತ್ತಿದ್ದಾರೆ. ಜಿಲ್ಲೆಯ 11 ವಿಧಾನಸಭಾ ಕ್ಷೇತ್ರಗಳಲ್ಲಿ ಮೂರು ಪಕ್ಷದ ಸಂಭಾವ್ಯ ಅಭ್ಯರ್ಥಿಗಳು ಈಗಾಗಲೇ ಪ್ರಚಾರ ಕಾರ್ಯಾರಂಭಿಸಿದ್ದಾರೆ.
ತಂದೆಯಿಂದ ಚುನಾವಣೆಯ ಕಲೆಯನ್ನು ಬಳುವಳಿಯಾಗಿ ಪಡೆಯಲು ಕೆಲವರು ಯತ್ನಿಸಿದರೆ, ಮತ್ತೆ ಕೆಲವರು ಉತ್ತರಾಧಿಕಾರಿಯಾಗಿ ಬೆಳೆಯಲು ವೇದಿಕೆಯನ್ನು ಸಜ್ಜುಗೊಳಿಸುತ್ತಿದ್ದಾರೆ. ಚುನಾವಣೆ ಘೋಷಣೆ ಮುನ್ನವೇ ಕ್ಷೇತ್ರವ್ಯಾಪ್ತಿ ಗೆಲುವಿನ ಕ್ರಿಯಾಯೋಜನೆ ಹೆಣೆಯುತ್ತಿದ್ದಾರೆ. ಚುನಾವಣೆ ಸಮೀಸುತ್ತಿದ್ದಂತೆ ಆಯಾ ಕ್ಷೇತ್ರದಲ್ಲಿ ಅಭ್ಯರ್ಥಿಗಳು, ಆಕಾಂಕ್ಷಿಗಳ ಮಕ್ಕಳು ಕ್ಷೇತ್ರ ಗೆಲ್ಲಲು ಖುದ್ದು ಅಖಾಡಕ್ಕಿಳಿದ್ದಾರೆ.
ವರುಣಾ ಕ್ಷೇತ್ರದಿಂದ ಮಾಜಿ ಸಿಎಂ ಸಿದ್ದರಾಮಯ್ಯ ಪುತ್ರ ಯತೀಂದ್ರ ಸಿದ್ದರಾಮಯ್ಯ, ಹುಣಸೂರು ಕ್ಷೇತ್ರದಲ್ಲಿ ಶಾಸಕ ಹೆಚ್.ಪಿ.ಮಂಜುನಾಥ್ ಪುತ್ರ ಪವನ್, ಟಿ. ನರಸೀಪುರದಿಂದ ಮಾಜಿ ಸಚಿವ ಡಾ.ಹೆಚ್.ಸಿ ಮಹದೇವಪ್ಪ ಪುತ್ರ ಸುನೀಲ್ ಬೋಸ್, ಚಾಮುಂಡೇಶ್ವರಿ ಕ್ಷೇತ್ರದಿಂದ ಕಾಂಗ್ರೆಸ್ ಮಾಜಿ ಶಾಸಕ ವಾಸು ಪುತ್ರ ಕವೀಶ್ ಗೌಡ, ಹುಣಸೂರು ಕ್ಷೇತ್ರದಿಂದ ಶಾಸಕ ಜಿ.ಟಿ.ದೇವೇಗೌಡ ಪುತ್ರ ಹರೀಶ್ ಗೌಡ, ಪಿರಿಯಾಪಟ್ಟಣ ಕ್ಷೇತ್ರದಿಂದ ಶಾಸಕ ಕೆ.ಮಹದೇವ ಪುತ್ರ ಪ್ರಸನ್ನ, ಕೆ.ಆರ್.ನಗರ ಕ್ಷೇತ್ರದಿಂದ ಶಾಸಕ ಸಾ.ರಾ.ಮಹೇಶ್ ಪುತ್ರ ಸಾ.ರಾ. ಜಯಂತ್, ಹೆಚ್.ಡಿ.ಕೋಟೆ ಕ್ಷೇತ್ರದಿಂದ ಮಾಜಿ ಶಾಸಕ ಚಿಕ್ಕಣ್ಣ ಪುತ್ರ ಜಯಪ್ರಕಾಶ್, ಹುಣಸೂರು ಕ್ಷೇತ್ರದಲ್ಲಿ ಜೆಡಿಎಸ್ ಪರವಾಗಿ ಮಾಜಿ ಶಾಸಕ ದಿವಂಗತ ಎಸ್. ಚಿಕ್ಕಮಾದು ಪುತ್ರಿ ರಂಜಿತಾ ಚುನಾವಣಾ ಚದುರಂಗದಲ್ಲಿದ್ದಾರೆ.
ಜಿ.ಟಿ.ದೇವೇಗೌಡ ಅವರ ಪುತ್ರ ಜಿ.ಡಿ.ಹರೀಶ್ ಗೌಡ ಅವರು ಈಗಾಗಲೇ ಹುಣಸೂರಿನಲ್ಲಿ ವಿಧಾನ ಸಭಾ ಚುನಾವಣೆಗೆ ಅಭ್ಯರ್ಥಿಯೆಂದು ಜೆಡಿಎಸ್ ಪಕ್ಷ ಪಟ್ಟಿ ಬಿಡುಗಡೆ ಮಾಡಿರುವುದರಿಂದ, ಹರೀಶ್ ಗೌಡ, ಕ್ಷೇತ್ರದಲ್ಲಿ ಭರ್ಜರಿಯಾಗಿ ರೌಂಡ್ಸ್ ಹಾಕುತ್ತಿದ್ದಾರೆ. ಪ್ರತಿ ವರ್ಷ ಹುಟ್ಟುಹಬ್ಬವನ್ನು ಮೈಸೂರಿನಲ್ಲಿ ಆಚರಿಸಿಕೊಳ್ಳುತ್ತಿದ್ದ ಇವರು, ಈ ಬಾರಿ ಹುಣಸೂರಿನಲ್ಲಿ ಅದ್ಧೂರಿಯಾಗಿ ಆಚರಿಸಿಕೊಳ್ಳುವ ಮೂಲಕ ಯುವಪಡೆಗೆ ಹತ್ತಿರವಾಗಲು ಮುಂದಾಗಿದ್ದಾರೆ.