ಮೈಸೂರು: ಜಿಲ್ಲೆಯ ಭತ್ತದ ಕಣಜ ಖ್ಯಾತಿಯ ಕೆ ಆರ್ ನಗರ ಮತಕ್ಷೇತ್ರವು ಚುನಾವಣೆಯ ಹೊಸ್ತಿಲಲ್ಲಿದೆ. ಕ್ಷೇತ್ರದಲ್ಲಿ ಹಾಲಿ ಶಾಸಕ ಸಾರಾ ಮಹೇಶ್ ಹಾಗೂ ಕಾಂಗ್ರೆಸ್ನ ರವಿ ಶಂಕರ್ ನಡುವೆ ಈ ಸಾರಿ ನೇರ ಪೈಪೋಟಿ ಏರ್ಪಡಲಿದೆ ಎಂಬ ಮಾತು ಅಲ್ಲಗಳೆಯುವಂತಿಲ್ಲ. ಹಾಗಾಗಿ ಈ ಬಾರಿ ಗೆಲುವು ಯಾರ ಪಾಲಾಗಲಿದೆ ಎಂಬುದು ಕೊನೆಯವರೆಗೂ ಊಹಿಸಿಲು ಸಾಧ್ಯವಿಲ್ಲ. ಜಿದ್ದಾಜಿದ್ದಿ ಮತ್ತು ನೇರ ಹಣಾಹಣಿ ಇದ್ದುದರಿಂದ ಚುನಾವಣೆ ಘೋಷಣೆಯಾಗದಿದ್ದರೂ ಎರಡೂ ಪಕ್ಷಗಳು ಈಗಾಗಲೇ ಪ್ರಚಾರ ಕೂಡ ಆರಂಭಿಸಿವೆ. ಕ್ಷೇತ್ರದಲ್ಲಿರುವ ಜಾತಿ ಪ್ರಾಬಲ್ಯ, ಒಟ್ಟು ಮತದಾರರ ವಿವರ, ಈವರೆಗೆ ನಡೆದ ಹದಿನೈದು ಚುನಾವಣೆಯಲ್ಲಿ ಯಾರೆಲ್ಲ ಗೆದ್ದು ಅಧಿಕಾರ ಹಿಡಿದಿದ್ದರು ಎಂಬ ಸಂಕ್ಷಿಪ್ತ ವಿವರ ಬರುವ ವಿಧಾನಸಭೆಯ ಚುನಾವಣೆಗೂ ಒಂದರ್ಥ ಕೊಡಬಲ್ಲದು.
ಒಕ್ಕಲಿಗರು ಹಾಗೂ ಕುರುಬ ಸಮುದಾಯದ ಪ್ರಾಬಲ್ಯವಿರುವ ಈ ಕ್ಷೇತ್ರದಲ್ಲಿ ಹಾಲಿ ಶಾಸಕರಿಗೆ ಮತ್ತೆ ಸವಾಲಿನ ಚುನಾವಣೆಯಾಗಿದ್ದರೆ ಕಾಂಗ್ರೆಸ್ನ ಡಿ. ರವಿಶಂಕರ್ಗೆ ಉಳಿವಿನ ಪ್ರಶ್ನೆಯಾಗಿದೆ. ಹಾಗಾಗಿ ಇವರಿಬ್ಬರ ನಡುವಿನ ನೇರ ಸ್ಪರ್ಧೆ ಆಗಲಿದೆ ಎಂಬ ಮಾಹಿತಿ ಇದೆ. ಈ ನಡುವೆ ತಾಲೂಕಿನಲ್ಲಿ ಬಿಜೆಪಿ ಸಂಘಟನೆಯೇ ಇಲ್ಲದಾಗಿದ್ದರಿಂದ ಮೂರನೇ ಸ್ಥಾನದಲ್ಲಿದೆ.
ಕ್ಷೇತ್ರದಲ್ಲಿ ಜಾತಿ ಲೆಕ್ಕಾಚಾರ ಹೇಗಿದೆ: ಕ್ಷೇತ್ರದ ಇತಿಹಾಸ ನೋಡಿದರೆ ಜಾತಿ ಕೇಂದ್ರಿತವಾಗಿಯೇ ಈ ಭಾಗದಲ್ಲಿ ಚುನಾವಣೆ ನಡೆಯುವುದು ಹೆಚ್ಚು. 58 ಸಾವಿರ ಒಕ್ಕಲಿಗ ಸಮುದಾಯದ ಮತದಾರರಿದ್ದರೆ 52 ಸಾವಿರ ಕುರುಬ ಸಮುದಾಯ ಮತಗಳಿವೆ. ತಾಲೂಕಿನಲ್ಲಿ ಇವೆರಡು ಸಮುದಾಯ ನಿರ್ಣಾಯಕವಾಗಿದೆ.
ಇದೇ ಕಾರಣಕ್ಕೆ ಈ ಜಿಲ್ಲೆಯಲ್ಲಿ ಜಾತಿ ರಾಜಕಾರಣಕ್ಕೆ ಮತದಾರ ಹೆಚ್ಚು ಪ್ರಭಾವಕ್ಕೆ ಒಳಗಾಗಿದ್ದಾನೆ. ಮಾತ್ರವಲ್ಲದೇ, ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡ, ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ, ಹೆಚ್.ಡಿ.ಕುಮಾರಸ್ವಾಮಿ ಹಾಗೂ ಹಿರಿಯ ರಾಜಕಾರಣಿ ಸಿ.ಹೆಚ್.ವಿಶ್ವನಾಥ್ ಪ್ರಭಾವ ಕೂಡ ಹೆಚ್ಚಿದೆ. ಈ ಎರಡು ಸಮುದಾಯ ಹೊರತುಪಡಿಸಿ ಪರಿಶಿಷ್ಟ ಜಾತಿ 20 ಸಾವಿರ, ಪರಿಶಿಷ್ಟ ಪಂಗಡ 15 ಸಾವಿರ, ಲಿಂಗಾಯಿತರು 15 ಸಾವಿರ, ಮುಸ್ಲಿಂ 12 ಸಾವಿರ ಹಾಗೂ ಇತರ ಸಮುದಾಯಗಳು 35,776 ಮತದಾರರಿದ್ದು ಇವರನ್ನು ಸೆಳೆಯುವ ಪ್ರಯತ್ನ ಪ್ರಬಲ ಆಕಾಂಕ್ಷಿಗಳಿಂದ ಸದ್ಯ ನಡೆಯುತ್ತವೆ.
ಈವರೆಗೂ ನಡೆದ 15 ಚುನಾವಣೆಗಳಲ್ಲಿ 7 ಬಾರಿ ಜೆಡಿಎಸ್ ಅಭ್ಯರ್ಥಿ ಗೆಲುವು ಕಂಡಿದ್ದರೆ, ಕಾಂಗ್ರೆಸ್ 5 ಬಾರಿ 3 ಬಾರಿ ಪಕ್ಷೇತರರು ಗೆಲುವಿನ ನಗೆ ಬೀರಿದ್ದಾರೆ. ಮೂವರು ಸಚಿವರನ್ನು ರಾಜ್ಯಕ್ಕೆ ನೀಡಿದ್ದು ಈ ಕ್ಷೇತ್ರದ ವಿಶೇಷ. ಹ್ಯಾಟ್ರಿಕ್ ಜಯದ ದಾಖಲೆ ಬರೆದ ಹಾಲಿ ಶಾಸಕ ಸಾ.ರಾ.ಮಹೇಶ್ ಮತ್ತೆ ಗೆದ್ದು ಸಚಿವರಾಗುವ ನಿರೀಕ್ಷೆಯಲ್ಲಿದ್ದಾರೆ. ಉಳಿದಂತೆ ಜನತಾ ಪರಿವಾರದ ಎಸ್.ನಂಜಪ್ಪ, ಕಾಂಗ್ರೆಸ್‌ನಿಂದ ಗೆದ್ದಿದ್ದ ಹೆಚ್.ಎಂ.ಚನ್ನಬಸಪ್ಪ ಮತ್ತು ಹೆಚ್.ವಿಶ್ವನಾಥ್ ಅವರು ಸಚಿವ ಸ್ಥಾನ ಗಿಟ್ಟಿಸಿಕೊಳ್ಳುವಲ್ಲಿಯೂ ಸಫಲರಾಗಿದ್ದು ಕ್ಷೇತ್ರದ ಇತಿಹಾಸ.
ಕಾಂಗ್ರೆಸ್ಗೆ ಅನುಕಂಪದ ನಿರೀಕ್ಷೆ: ಕಾಂಗ್ರೆಸ್‌ನಿಂದ ಅಧಿಕೃತವಾಗಿ ಅಭ್ಯರ್ಥಿ ಪ್ರಕಟವಾಗಿಲ್ಲವಾದರೂ, ಹಿರಿಯ ಕಾಂಗ್ರೆಸ್ ಮುಖಂಡ ದೊಡ್ಡಸ್ವಾಮೇಗೌಡರ ಪುತ್ರ, ಜಿ.ಪಂ ಮಾಜಿ ಸದಸ್ಯ ಡಿ.ರವಿಶಂಕರ್ ಬಹುತೇಕ ಅಭ್ಯರ್ಥಿಯಾಗಲಿದ್ದಾರೆ. ಆದರೆ, ಮಾಜಿ ಶಾಸಕ ಮಂಚನಹಳ್ಳಿ ಮಹದೇವ್ ಪುತ್ರಿ ಐಶ್ವರ್ಯ ಮಹದೇವ್ ಹಾಗೂ ಪಕ್ಷದ ಮುಖಂಡ ಬಾಬು ಹನುಮಾನ್ ಕೂಡ ಟಿಕೆಟ್ ಮೇಲೆ ಕಣ್ಣಿಟ್ಟಿದ್ದಾರೆ.