ಬೆಂಗಳೂರು: ರಾಜ್ಯ ವಿಧಾನಸಭಾ ಚುನಾವಣೆ ಫಲಿತಾಂಶ ಪ್ರಕಟಕ್ಕೆ ಕ್ಷಣಗಣನೆ ಶುರುವಾಗಿದೆ. ಕಣದಲ್ಲಿರುವ ವಿವಿಧ ರಾಜಕೀಯ ಪಕ್ಷಗಳ ಅಭ್ಯರ್ಥಿಗಳ ಎದೆಬಡಿತ ಜೋರಾಗಿದೆ. ಮತ್ತೊಂದೆಡೆ, ಸೋಲು ಗೆಲುವಿನ ಬಗ್ಗೆ ಅಭ್ಯರ್ಥಿಗಳ ಬೆಂಬಲಿಗರು ಮತ್ತು ಕಾರ್ಯಕರ್ತರ ನಡುವೆ ಬೆಟ್ಟಿಂಗ್ ಕೂಡ ಹೆಚ್ಚಾಗಿದೆ. ಇದರ ನಡುವೆ ಮೈಸೂರಿನ ಹೆಚ್ಡಿ ಕೋಟೆಯಲ್ಲಿ ಬೆಟ್ಟಿಂಗ್ ಕಟ್ಟಿದ್ದ ಐದು ಲಕ್ಷ ರೂಪಾಯಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ಬಗ್ಗೆ ರಾಜ್ಯ ಕಾನೂನು ಮತ್ತು ಸುವ್ಯವಸ್ಥೆಯ ಎಡಿಜಿಪಿ ಅಲೋಕ್ ಕುಮಾರ್ ಟ್ವೀಟ್ ಮೂಲಕ ಮಾಹಿತಿ ನೀಡಿದ್ದಾರೆ.
ಹೆಚ್ಡಿ ಕೋಟೆಯಲ್ಲಿ ಇಬ್ಬರು ವ್ಯಕ್ತಿಗಳು ತಲಾ ಐದು ಲಕ್ಷ ರೂಪಾಯಿ ಬೆಟ್ಟಿಂಗ್ ಬಗ್ಗೆ ಮಾಹಿತಿ ಹಂಚಿಕೊಂಡಿರುವ ಎಡಿಜಿಪಿ ಅಲೋಕ್ ಕುಮಾರ್, ''ಎಂತಹ ದಿಟ್ಟತನ!! ಡಾಕ್ಯುಮೆಂಟ್ ಶೀಟ್‌ನಲ್ಲಿ ಚುನಾವಣಾ ಬೆಟ್ಟಿಂಗ್ ಒಪ್ಪಂದ ಮಾಡಿಕೊಳ್ಳಲಾಗಿದೆ'' ಎಂದು ಬರೆದುಕೊಂಡಿದ್ದಾರೆ. ಅಲ್ಲದೇ, ''ಈ ಪ್ರಕರಣದಲ್ಲಿ 5 ಲಕ್ಷ ರೂಪಾಯಿ ವಶಕ್ಕೆ ಪಡೆಯಲಾಗಿದೆ. ಬೆಟ್ಟಿಂಗ್ ನಡೆಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು'' ಎಂದು ಎಚ್ಚರಿಸಿದ್ದಾರೆ.