ಮೈಸೂರು: ನಲ್ವತ್ತು ವರ್ಷಗಳಿಂದ ವಾಸವಿದ್ದ ಸ್ವಂತ ಜಾಗ ಉಳಿಸಿಕೊಳ್ಳಲು ಪರದಾಡುತ್ತಿರುವ ವೃದ್ಧ ದಂಪತಿ 4 ತಿಂಗಳಿಂದ ನ್ಯಾಯಕ್ಕಾಗಿ ಅಲೆದಾಡಿ ಬೇಸರಗೊಂಡಿದ್ದಾರೆ. ಇದೀಗ ಜೀವನವೇ ಬೇಡವೆಂದು ಮನನೊಂದು ದಯಾಮರಣ ನೀಡುವಂತೆ ಜಿಲ್ಲಾಧಿಕಾರಿಗೆ ಮನವಿ ಮಾಡಿದ್ದಾರೆ.
ಆಸ್ತಿ ಮೇಲೆ ದುಷ್ಕರ್ಮಿಗಳ ವಕ್ರದೃಷ್ಟಿ: ನ್ಯಾಯ ಸಿಗದೆ ನೊಂದ ಹಿರಿಜೀವಗಳಿಂದ ದಯಾಮರಣಕ್ಕೆ ಅರ್ಜಿ - Mysore
ಸ್ವಂತ ಜಾಗ ಉಳಿಸಿಕೊಳ್ಳಲು ಅಂದಾಜು ನಾಲ್ಕು ತಿಂಗಳುಗಳಿಂದ ಅಲೆದಾಡಿ ಬೇಸರಗೊಂಡ ವೃದ್ಧ ದಂಪತಿ ಜೀವನವೇ ಬೇಡವೆಂದು ಮನನೊಂದು ದಯಾಮರಣ ನೀಡುವಂತೆ ಜಿಲ್ಲಾಧಿಕಾರಿಗಳಿಗೆ ಅರ್ಜಿ ಬರೆದಿದ್ದಾರೆ.
ಮೈಸೂರಿನ ಜನತಾನಗರದಲ್ಲಿ ವಾಸವಾಗಿರುವ ಈ ದಂಪತಿ ಹೆಸರು ಲಕ್ಕೇಗೌಡ ಹಾಗೂ ಮರಿಯಮ್ಮ. ಇಳಿವಯಸ್ಸಿನಲ್ಲಿಯೂ ಇವರು ಬೇಸರದಿಂದ ದಿನ ದೂಡುವಂತಾಗಿದೆ. ಇವರು ನಲ್ವತ್ತು ವರ್ಷಗಳ ಹಿಂದೆ ಜನತಾನಗರದಲ್ಲಿ 80:60 ವಿಸ್ತೀರ್ಣದ ನಿವೇಶನ ಖರೀದಿಸಿ ಪುಟ್ಟ ಮನೆ ಕಟ್ಟಿ ವಾಸವಿದ್ದರು. ವೃತ್ತಿಯಲ್ಲಿ ಶಿಕ್ಷಕರಾಗಿದ್ದ ಲಕ್ಕೇಗೌಡ ಸ್ಥಳದಲ್ಲೇ ಪುಟ್ಟ ಶಾಲೆ ನಿರ್ಮಿಸಿ ಮಕ್ಕಳಿಗೆ ವಿದ್ಯಾಭ್ಯಾಸ ನೀಡುತ್ತಿದ್ದರು. ಹಳೆ ಕಟ್ಟಡವಾದ್ದರಿಂದ ಮನೆಯನ್ನು ಪುನರ್ ನಿರ್ಮಾಣ ಮಾಡಲು ಮುಂದಾಗಿ ಕಟ್ಟಡ ನೆಲಸಮಗೊಳಿಸಿದರು.
ಆಗ ಪ್ರತ್ಯಕ್ಷರಾದ ನಿವೇಶನದ ಹಳೇ ಮಾಲೀಕರ ಮನೆಯವರು ಇದು ನಮಗೆ ಸೇರಬೇಕಾದ ಆಸ್ತಿ ಎಂದು ಗಲಾಟೆ ಶುರುಮಾಡಿದ್ದಾರೆ. ಗುಂಪು ಕಟ್ಟಿಕೊಂಡು ಬಂದ ವೃದ್ಧ ದಂಪತಿ ಮೇಲೆ ದೌರ್ಜನ್ಯ ಎಸಗಿ ಜಾಗ ಖಾಲಿ ಮಾಡುವಂತೆ ಧಮ್ಕಿ ಹಾಕಿದ್ದಾರಂತೆ. ಪುಂಡರ ಹಾವಳಿ ಸಹಿಸದೆ ಲಕ್ಕೇಗೌಡ ಪೊಲೀಸ್ ಠಾಣೆಗೆ ದೂರು ಕೊಟ್ಟು ನಮ್ಮ ಬದುಕು ಉಳಿಸಿ ಎಂದು ಅಂಗಲಾಚಿದರೂ ಪ್ರಯೋಜನವಾಗಿಲ್ಲ ಎನ್ನುತ್ತಿದ್ದಾರೆ.
ಇವರಿಗೆ ಪುಂಡರ ಕಿರಿಕಿರಿ ಮಿತಿಮೀರುತ್ತಿದೆ. ಕಿಡಿಗೇಡಿಗಳ ಕುತಂತ್ರಕ್ಕೆ ಬೇಸತ್ತ ಲಕ್ಕೇಗೌಡ ದಯಾಮರಣ ಕೋರಿ ಜಿಲ್ಲಾಧಿಕಾರಿಗಳಿಗೆ ಅರ್ಜಿ ಬರೆದಿದ್ದಾರೆ.