ಮೈಸೂರು :ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ದಸರಾ ಸಂಭ್ರಮ ಕಳೆಗಟ್ಟಿದೆ. ಕಾಡಿನಿಂದ ನಾಡಿಗೆ ಬಂದ ಗಜ ಪಡೆಗಳಿಗೆ ದಸರಾ ಜಂಬೂ ಸವಾರಿ ತಾಲೀಮು ಆರಂಭವಾಗಿದೆ. ಈ ಬಾರಿಯ ಅಂಬಾರಿ ಆನೆ ಕೂಂಬಿಂಗ್ ಸ್ಪೆಷಲಿಸ್ಟ್ ಅಭಿಮನ್ಯುಗೆ ಇವತ್ತು ಮರಳು ಮೂಟೆ ಹೊರಿಸಿ ಭರ್ಜರಿ ತಾಲೀಮು ನಡೆಸಲಾಯಿತು. ತಾಲೀಮಿನಲ್ಲಿ ಅಭಿಮನ್ಯು ಗತ್ತು ಹಾಗೂ ಕ್ಯಾಪ್ಟನ್ಗೆ ಗಜಪಡೆ ಸೇನೆ ಸಾಥ್ ಕೊಟ್ಟಿರುವ ವಿವರ ಇಲ್ಲಿದೆ.
ಎರಡನೇ ಬಾರಿಗೆ 750 ಕೆಜಿ ತೂಕದ ಚಿನ್ನದ ಅಂಬಾರಿ ಹೊರಲು ಕ್ಯಾಪ್ಟನ್ ಅಭಿಮನ್ಯು ಸಜ್ಜಾಗಿದ್ದಾನೆ. ಈಗಾಗಲೇ ಕಾಡಿನಿಂದ ನಾಡಿಗೆ ಬಂದು ಅರಮನೆ ಅಂಗಳದಲ್ಲಿ ವಾಸ್ತವ್ಯ ಹೂಡಿರುವ ಕ್ಯಾಪ್ಟನ್ ಅಭಿಮನ್ಯು ಅಂಡ್ ಟೀಂಗೆ ಅರಣ್ಯ ಇಲಾಖೆಯಿಂದ ವಿಶೇಷ ಆಹಾರ ನೀಡಿ ಆರೈಕೆ ಮಾಡಲಾಗುತ್ತಿದೆ.
ದಸರಾಗೆ ದಿನಗಣನೆ ಹಿನ್ನೆಲೆ ಇವತ್ತು ಸುಮಾರು 600 ಕೆಜಿ ಭಾರ ಇರುವ ನಮ್ದ, ಗಾದಿ ಜೊತೆಗೆ ಮರಳು ಮೂಟೆಯನ್ನ ಕ್ಯಾಪ್ಟನ್ ಅಭಿಮನ್ಯುಗೆ ಹೊರಿಸಿ ಅರಮನೆ ಅಂಗಳದಲ್ಲಿ ತಾಲೀಮು ನಡೆಸಲಾಯಿತು. ಅಭಿಮನ್ಯುಗೆ ಆನೆಗಳಾದ ಚೈತ್ರ, ಕಾವೇರಿ, ಲಕ್ಷ್ಮಿ, ಧನಂಜಯ,ಅಶ್ವತ್ಥಾಮ, ಗೋಪಾಲಸ್ವಾಮಿ, ವಿಕ್ರಮ ಸಾಥ್ ನೀಡಿದವು.
ಇಂದು (ಸೋಮವಾರ) ಮಧ್ಯಾಹ್ನ 12:30ರ ವೇಳೆ ಅರಮನೆ ಪುರೋಹಿತರು ಆನೆಗಳಿಗೆ ಬೆಲ್ಲ ಹಾಗೂ ಕಬ್ಬು ನೀಡಿ ಪೂಜೆ ಸಲ್ಲಿಸಿದರು. ಪ್ರತಿ ವರ್ಷವೂ ಮೈಸೂರಿನ ಪ್ರಮುಖ ಬೀದಿಗಳಲ್ಲಿ ಗಜಪಡೆಯ ಗಜಗಾಂಭೀರ್ಯ ನಡಿಗೆ ಜೋರಾಗಿ ನಡೆಯುತ್ತಿತ್ತು.