ಮೈಸೂರು:ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಜಂಬೂ ಸವಾರಿ ಅದ್ಧೂರಿಯಾಗಿ ನೆರವೇರಿತು. ಚಿನ್ನದ ಅಂಬಾರಿಯನ್ನು ಹೊತ್ತು ಆನೆ ಅಭಿಮನ್ಯು ರಾಜಗಾಂಭೀರ್ಯದೊಂದಿಗೆ ಸಾಗಿದರೆ, ಗಜಪಡೆ, ಕಲಾತಂಡಗಳು ಸಾಥ್ ನೀಡಿದವು.
ಅರಮನೆಯ ಬಲರಾಮ ದ್ವಾರದಲ್ಲಿ ಮಧ್ಯಾಹ್ನ 2.36-2.50ರವರೆಗೆ ಶುಭ ಮಕರ ಲಗ್ನದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನಂದಿ ಧ್ವಜ ಪೂಜೆ ನೆರವೇರಿಸಿದರು. ಬಳಿಕ, ಸಂಜೆ 5.07-ದ 5.18ರವರೆಗಿನ ಶುಭ ಮೀನ ಲಗ್ನದಲ್ಲಿ ಅಂಬಾ ವಿಲಾಸ ಅರಮನೆಯಲ್ಲಿ ಜಂಬೂ ಸವಾರಿಗೆ ಚಾಲನೆ ನೀಡಬೇಕಿತ್ತು. ಆದರೆ ತಡವಾಗಿ 5.38ರ ವೇಳೆಗೆ ಪುಷ್ಪಾರ್ಚನೆ ಮಾಡಲಾಯಿತು.
ಅದ್ಧೂರಿಯಾಗಿ ನೆರವೇರಿದ ಜಂಬೂ ಸವಾರಿ ನಾಡ ಅಧಿದೇವತೆ ಚಾಮುಂಡೇಶ್ವರಿ ತಾಯಿಯನ್ನು ಹೊತ್ತ ಅಭಿಮನ್ಯು ಆನೆ ರಾಜ ಗಾಭೀರ್ಯದಿಂದ ವೇದಿಕೆ ಮುಂಭಾಗಕ್ಕೆ ಬಂದ ಸಂದರ್ಭದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ರಾಜ ವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್, ಉಸ್ತುವಾರಿ ಸಚಿವ ಎಸ್.ಟಿ ಸೋಮಶೇಖರ್, ಸಚಿವ ಸುನೀಲ್ ಕುಮಾರ್, ಮೈಸೂರು ಜಿಲ್ಲೆಯ ಜಿಲ್ಲಾಧಿಕಾರಿ ಗೌತಮ್ ಬಗಾದಿ, ನಗರ ಪೊಲೀಸ್ ಕಮಿಷನರ್ ಡಾ. ಚಂದ್ರಗುಪ್ತ ಅವರು ಪುಷ್ಪಾರ್ಚನೆ ಮಾಡುವ ಮೂಲಕ ಜಂಬೂಸವಾರಿಗೆ ಚಾಲನೆ ನೀಡಿದರು. 750 ಕೆಜಿ ತೂಕದ ಚಿನ್ನದ ಅಂಬಾರಿಯನ್ನು ಆನೆ ಅಭಿಮನ್ಯು ಹೊತ್ತು ರಾಜಗಾಂಭೀರ್ಯದೊಂದಿಗೆ ನಡೆಯುವ ಮೂಲಕ ಜಂಬೂಸವಾರಿ ನೆರವೇರಿತು.
ಇದಕ್ಕೂ ಮುನ್ನ ನಾಡಿನ ಕಲೆ, ಸಾಂಸ್ಕೃತಿಕ ವೈಭವವನ್ನು ಸಾರುವ ದಸರಾ ಸ್ತಬ್ಧಚಿತ್ರ ಮೆರವಣಿಗೆ ನಡೆಯಿತು. ಲಕ್ಷಾಂತರ ಮಂದಿ ಗತ ವೈಭವ ಸಾರುವ ದಸರಾ ಕಣ್ತುಂಬಿಕೊಂಡರು. ಸಂಜೆ 7.30ಕ್ಕೆ ಬನ್ನಿಮಂಟಪದ ಮೈದಾನದಲ್ಲಿ ಪಂಜಿನ ಕವಾಯತು ಜರುಗಲಿದೆ. ಇದರೊಂದಿಗೆ ಸಂಭ್ರಮದ ನಾಡಹಬ್ಬಕ್ಕೆ ತೆರೆ ಬೀಳಲಿದೆ.
ಇದನ್ನೂ ಓದಿ :ಶಿವಮೊಗ್ಗದಲ್ಲಿ ದಸರಾ: ಅಂಬಾರಿ ಮೇಲೆ ಸಾಗಿದ ತಾಯಿ ಚಾಮುಂಡೇಶ್ವರಿ