ಮೈಸೂರು:ಹಿಂದೆ ಗಾಂಜಾ ಮಾರಾಟ ಮಾಡಿ ಸಿಕ್ಕಿಬಿದ್ದವರ ಮೇಲೆ ಸ್ಥಳೀಯ ಪೊಲೀಸ್ ಠಾಣೆ ಕಾನ್ಸ್ ಟೇಬಲ್ ಗಳು ಕಣ್ಣಿಡಲಿದ್ದಾರೆ. ಜೊತೆಗೆ ರೆಸಾರ್ಟ್ ಗಳಲ್ಲಿ ಗಾಂಜಾ ಮಾರಿದರೆ ಅದಕ್ಕೆ ಮಾಲೀಕರೆ ಜವಾಬ್ದಾರರು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ.ರಿಷ್ಯಂತ್ ಹೇಳಿಕೆ ನೀಡಿದ್ದಾರೆ.
ರೆಸಾರ್ಟ್ಗಳಲ್ಲಿ ಗಾಂಜಾ ಮಾರಿದರೆ ಮಾಲೀಕರೇ ಜವಾಬ್ದಾರರು: ಎಸ್ಪಿ ರಿಷ್ಯಂತ್ - Mysore latest news
ಮೈಸೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ.ರಿಷ್ಯಂತ್ ಅವರು ಮಾಧ್ಯಮಗೋಷ್ಠಿ ನಡೆಸಿದರು. ಈ ವೇಳೆ ಗಾಂಜಾ ಮಾರಾಟ ಮಾಡುತ್ತಿದ್ದವರ ಮೇಲೆ ನಿಗಾ ವಹಿಸಲಾಗಿದೆ ಎಂದು ಮಾಹಿತಿ ನೀಡಿದರು.
ಇಂದು ತಮ್ಮ ಕಚೇರಿಯಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಇತ್ತೀಚಿಗೆ ಗಾಂಜಾ ಕೇಸ್ ಗಳು ಹೆಚ್ಚಾಗುತ್ತಿದ್ದು, ಜಿಲ್ಲೆಯ ಬೈಲಕುಪ್ಪ ಮತ್ತು ಹುಣಸೂರು ಭಾಗದಲ್ಲಿ ಗಾಂಜಾ ಬೆಳೆಯುತ್ತಾರೆ. ಅಲ್ಲಿ ಗಾಂಜಾ ಕೇಸ್ ಗಳು ಹೆಚ್ಚಾಗಿದ್ದು, ಈ ಭಾಗದಲ್ಲಿ ಹಿಂದೆ ಗಾಂಜಾ ಬೆಳೆದು ಮಾರಾಟ ಮಾಡುತ್ತಿರುವವರನ್ನು ಸ್ಥಳೀಯ ಪೊಲೀಸ್ ಠಾಣೆಯ ಕಾನ್ಸ್ ಟೇಬಲ್ ವಿಚಾರಣೆ ನಡೆಸಿ, ಅವರ ಮೇಲೆ ನಿಗಾ ಇಟ್ಟಿದ್ದಾರೆ. ಜೊತೆಗೆ ಜಿಲ್ಲೆಯ ರೆಸಾರ್ಟ್ ಮತ್ತು ಹೋಟೆಲ್ ಗಳಲ್ಲಿ ಈ ರೀತಿಯ ಚಟುವಟಿಕೆ ನಡೆದರೆ ಹೋಟೆಲ್ ಮಾಲೀಕರೇ ಜವಾಬ್ದಾರರು ಎಂದು ತಿಳಿಸಿದರು.
ಇತ್ತೀಚೆಗೆ ಕಾಲೇಜು ವಿದ್ಯಾರ್ಥಿಗಳಲ್ಲಿ ಈ ರೀತಿ ಚಟುವಟಿಕೆಗಳು ಹೆಚ್ಚಾಗುತ್ತಿದ್ದು, ಈ ಬಗ್ಗೆ ವಾಟ್ಸ್ ಆಪ್ ಗ್ರೂಪ್ ಗಳ ಮೂಲಕ ಜಾಗೃತಿ ಮೂಡಿಸುವ ಕೆಲಸ ಮಾಡಲಾಗುವುದು. ಪೋಷಕರು ಆಕಸ್ಮಿಕವಾಗಿ ತಮ್ಮ ಮಕ್ಕಳು ಈ ರೀತಿ ಚಟಕ್ಕೆ ಬಿದ್ದಿದ್ದರೆ ಎಲ್ಲಿ ಪೊಲೀಸ್ ಕೇಸ್ ಆಗುತ್ತದೆ ಎಂದು ಇರಬಾರದು. ಪೊಲೀಸರಿಗೆ ಮಾಹಿತಿ ನೀಡಿದರೆ ಅಥವಾ ಕಾಲ್ ಮಾಡಿದರೆ ಈ ಬಗ್ಗೆ ಅವರ ಪರಿವರ್ತನೆಗೆ ಸಹಾಯ ಮಾಡಬಹುದು. ಪೋಷಕರು ಸಹ ತಮ್ಮ ಮಕ್ಕಳ ಬಗ್ಗೆ ತಿಳಿಯಬೇಕೆಂದು ಎಸ್ಪಿ ರಿಷ್ಯಂತ್ ತಿಳಿಸಿದರು.