ಮೈಸೂರು :ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ ಟಿ ರವಿಯೊಬ್ಬ ಕುಡುಕ ಹಾಗೂ ವ್ಯಭಿಚಾರಿ. ಇವರಿಗೆ ಕಾಂಗ್ರೆಸ್ ನಾಯಕರ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್ ಧ್ರುವನಾರಾಯಣ್ ವಾಗ್ದಾಳಿ ನಡೆಸಿದ್ದಾರೆ.
ಸ್ವಾತಂತ್ರ್ಯ ಹೋರಾಟಗಾರರ ಉದ್ಯಾನವನದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕುಡುಕನ ಬಾಯಲ್ಲಿ ಇಂತಹ ಮಾತು ಬರುವುದು ಸಹಜ. ಪ್ರವಾಸೋದ್ಯಮ ಸಚಿವನಾಗಿದ್ದಾಗ ಕ್ಯಾಸಿನೋ ಆರಂಭಿಸಲು ಮುಂದಾಗಿದ್ದ. ಆದರೆ, ರಾಜ್ಯಾದ್ಯಂತ ವ್ಯಾಪಕ ಪ್ರತಿಭಟನೆ ನಡೆದಿದ್ದರಿಂದ ಕ್ಯಾಸಿನೋ ಕೈಬಿಡಲಾಯಿತು ಎಂದರು.
ಸಿ ಟಿ ರವಿ ವಿರುದ್ಧ ಆರ್ ಧ್ರುವನಾರಾಯಣ್ ವಾಗ್ದಾಳಿ ಸ್ವತಃ ಕಾರು ಚಾಲನೆ ಮಾಡಿ, ಇಬ್ಬರನ್ನ ಕೊಂದ ಸಿ ಟಿ ರವಿ ಹಿಟ್ ಅಂಡ್ ರನ್ ಕೇಸ್ ಮಾಡಿದರು. ರಾಜ್ಯದಲ್ಲಿ ಬಿಜೆಪಿ ಅಭಿವೃದ್ಧಿ ಕೆಲಸ ಮಾಡುವಲ್ಲಿ ವಿಫಲವಾಗಿದೆ. ಇದರ ದಿಕ್ಕುತಪ್ಪಿಸಲು ಸಿ ಟಿ ರವಿ ಇಂತಹ ಹೇಳಿಕೆ ಕೊಡುತ್ತಿದ್ದಾರೆ ಎಂದು ಟೀಕಿಸಿದರು.
ಇಂದಿರಾ ಗಾಂಧಿ ಅವಧಿಯಲ್ಲಿ ಆಹಾರ ಭದ್ರತೆಗೆ ಹೆಚ್ಚಿನ ಆದ್ಯತೆ ನೀಡಿ, ಹಸಿರು ಕ್ರಾಂತಿ ಮಾಡಿದರು. ಬಡವರ ಹಸಿವು ನೀಗಿಸಿದ ದೇಶದ ನಿಜವಾದ ಅನ್ನಪೂರ್ಣೇಶ್ವರಿ. ಇಂದಿರಾಗಾಂಧಿ ಹಾಗೂ ನೆಹರು ಬಗ್ಗೆ ಮಾತನಾಡಲು ನೈತಿಕತೆ ಇಲ್ಲ ಎಂದರು.
ಬಿಜೆಪಿಯವರು ಶ್ರೀರಾಮಚಂದ್ರನ ಮಕ್ಕಳು ಅಂತಾರೆ. ಆದರೆ, ಏನೇನು ಮಾಡ್ತಾರಂತಾ ಜನತೆಗೆ ಗೊತ್ತು. ಕಾಂಗ್ರೆಸ್ ಮಾಡಿದ ಅಭಿವೃದ್ಧಿ ಕೆಲಸಗಳಿಗೆ ಮರು ನಾಮಕರಣ ಮಾಡುವುದೇ ಬಿಜೆಪಿಯವರ ಕೆಲಸ ಎಂದು ಜರಿದರು.
ಬಿಜೆಪಿ ಅಧಿಕಾರವಧಿ ಪೂರೈಸುವುದಿಲ್ಲ, ರಾಜ್ಯದಲ್ಲಿ ಚುನಾವಣೆ ಯಾವಾಗಲಾದರೂ ಬರಬಹುದು. ಯಾವ ಖಾತೆ ಪಡೆದು ಹಣ ಮಾಡಬಹುದು ಎಂದು ಯೋಚಿಸುತ್ತಾರೆ. ಈಗಿನ ಸರ್ಕಾರ ಅಧಿಕಾರ ಪೂರೈಸುವುದಿಲ್ಲ, ಸಚಿವರು ಅಧಿಕಾರಕ್ಕಾಗಿ ಕಿತ್ತಾಡುತ್ತಿದ್ದಾರೆ ಎಂದರು.
ಓದಿ:ವಾಜಪೇಯಿ ಹೆಸರು ಹೇಳಲು ಯೋಗ್ಯತೆ ಇಲ್ಲದ ಬಚ್ಚಾ ಪ್ರಿಯಾಂಕ್ ಖರ್ಗೆ : ರೇಣುಕಾಚಾರ್ಯ