ಮೈಸೂರು: ಬಿಜೆಪಿಯವರು ಗೋಹತ್ಯೆ ನಿಷೇಧ ಜಾರಿಗೆ ಮಾಡುವ ಮುನ್ನವೇ, ಕಾಂಗ್ರೆಸ್ 1964ನೇ ಇಸವಿಯಲ್ಲಿಯೇ ಗೋಹತ್ಯೆ ನಿಷೇಧ ಕಾನೂನು ಜಾರಿಗೆ ತಂದಿತ್ತು ಎಂದು ಮಾಜಿ ಸಚಿವ ಡಾ.ಎಚ್.ಸಿ.ಮಹಾದೇವಪ್ಪ ಹೇಳಿದರು.
ತಿ.ನರಸೀಪುರ ತಾಲೂಕಿನಲ್ಲಿ ನಡೆದ ಗ್ರಾಮ ಜನಾಧಿಕಾರ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಏನು ಕೆಲಸ ಮಾಡದೇ ಇರುವವರು ಕಾಂಗ್ರೆಸ್ ಪಕ್ಷ ಮತ್ತು ಸಿದ್ದರಾಮಯ್ಯನವರನ್ನು ಪ್ರಶ್ನೆ ಮಾಡುತ್ತಿದ್ದಾರೆ. ಕರ್ನಾಟಕ ರಾಜ್ಯದಲ್ಲಿ ದೇವರಾಜು ಅರಸು ನಂತರ ಯಾರಾದ್ರೂ ಅತ್ಯಂತ ಯಶಸ್ವಿ ನಾಯಕರಾಗಿದ್ದರೆ ಅದು ಸಿದ್ದರಾಮಯ್ಯನವರು ಎಂದರು.
ಮಾಜಿ ಸಚಿವ ಡಾ.ಎಚ್.ಸಿ.ಮಹಾದೇವಪ್ಪ ಸಿದ್ದರಾಮಯ್ಯನವರು ಬೇಕಿದ್ದರೆ ದನದ ಮಾಂಸ ತಿಂದುಕೊಂಡು ಹೋಗಲಿ ಎಂದು ಬಿಜೆಪಿ ನಾಯಕರು ಹೇಳುತ್ತಾರೆ. ಆದರೆ, ಸಂವಿಧಾನದಲ್ಲಿ ಆಹಾರ ಪದ್ಧತಿ ನಮ್ಮ ಹಕ್ಕು ಎಂದಿದೆ. ಆಹಾರ ಪದ್ಧತಿಯನ್ನು ಕಿತ್ತುಕೊಳ್ಳಬಾರದು ಎಂದು ಹೇಳಿದರು.
ಅನಾರೋಗ್ಯದ ಸಮಸ್ಯೆಯಿಂದ ನಾನು ಕೆಲ ಕಾರ್ಯಕ್ರಮದಲ್ಲಿ ಭಾಗಿಯಾಗಲು ಸಾಧ್ಯವಾಗಲಿಲ್ಲ. ನರಸೀಪುರ ಮತ್ತು ನಂಜನಗೂಡು ನನ್ನ ರಾಜಕೀಯ ಭಾಗದ ಎರಡು ಕಣ್ಣುಗಳು ಇದ್ದಹಾಗೆ. ವಿಧಾನಸಭಾ ಚುನಾವಣೆಯಲ್ಲಿ ಸೋತಿದ್ದು ನನಗೆ ಹೊಸದೇನಲ್ಲ. ನನ್ನ 40ವರ್ಷದ ರಾಜಕೀಯ ಜೀವನದಲ್ಲಿ ಸೋಲು ಗೆಲುವು ಎರಡನ್ನು ನೋಡಿದ್ದೇನೆ ಎಂದರು.
ಜನಪರವಾಗಿ ಕೆಲಸ ವಹಿಸುವ ಅಭ್ಯರ್ಥಿಗಳು ಚುನಾವಣೆಯಿಂದ ಹಿಂದೆ ಸರಿದರೆ, ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಕಾಪಾಡಲು ಸಾಧ್ಯವಿಲ್ಲ ಎಂದು ಹೇಳಿದರು.