ಮೈಸೂರು :ಚಾಮರಾಜನಗರ ಲೋಕಸಭಾ ಕ್ಷೇತ್ರದಿಂದ ಸ್ಪರ್ಧೆ ಮಾಡಲು ನಾನು ಯೋಚನೆ ಮಾಡಿಲ್ಲ. ಆದರೆ ಪಕ್ಷ ತೀರ್ಮಾನ ಮಾಡಿದರೆ ಸ್ಪರ್ಧೆ ಮಾಡುತ್ತೇನೆ ಎಂದು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಡಾ. ಹೆಚ್ ಸಿ ಮಹಾದೇವಪ್ಪ ಹೇಳಿಕೆ ನೀಡಿದ್ದಾರೆ. ಜೊತೆಗೆ ಪಕ್ಷ ಆಯ್ಕೆ ಮಾಡಿದರೆ ನನ್ನ ಮಗ ಸುನೀಲ್ ಬೋಸ್ ಕೂಡ ಆಕಾಂಕ್ಷಿ ಎಂದು ಇದೇ ಸಂದರ್ಭದಲ್ಲಿ ದ್ವಂದ್ವ ಹೇಳಿಕೆ ನೀಡಿದ್ದಾರೆ.
ಇಂದು ಮೈಸೂರಿನಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಚಾಮರಾಜನಗರ ಲೋಕಸಭಾ ಕ್ಷೇತ್ರದಿಂದ ನಾನು ಸ್ಪರ್ಧೆ ಮಾಡುವ ಯೋಚನೆ ಮಾಡಿಲ್ಲ. ಆದರೆ ಪಕ್ಷ ತೀರ್ಮಾನ ಮಾಡಿದರೆ ಸ್ಪರ್ಧೆ ಮಾಡುತ್ತೇನೆ. ಆದರೆ ನಾನು ಆಕಾಂಕ್ಷಿ ಅಲ್ಲ. ಚಾಮರಾಜನಗರದ ಅಭ್ಯರ್ಥಿಯನ್ನ ಕಾಂಗ್ರೆಸ್ ಪಕ್ಷ ಆಯ್ಕೆ ಮಾಡುತ್ತದೆ. ಸುನೀಲ್ ಬೋಸ್ ಕೂಡ ಪಕ್ಷ ತೀರ್ಮಾನ ಮಾಡಿದರೆ ಸ್ಪರ್ಧೆ ಮಾಡುತ್ತಾರೆ. ಏಕೆಂದರೆ ಅವರು ನನ್ನ ಮಗ ಎಂದು ಹೇಳುತ್ತಿಲ್ಲ. ಅವರು ಪಕ್ಷಕ್ಕಾಗಿ ಕೆಲಸ ಮಾಡಿದ್ದಾರೆ ಎಂದು ತಮ್ಮ ಮಗನ ಪರವಾಗಿ ಸಚಿವರು ಬ್ಯಾಟ್ ಬೀಸಿದರು.
ಕಾಂಗ್ರೆಸ್ ಪಕ್ಷಕ್ಕೆ ಸೋಮಣ್ಣ ಸೇರುವ ವಿಚಾರದಲ್ಲಿ ನಾನು ಏನು ಹೇಳುವುದು. ಪಕ್ಷದ ಸಿದ್ದಾಂತ ಒಪ್ಪಿ ಬಂದರೆ ಬರಲಿ, ಅದನ್ನು ಪಕ್ಷ ತೀರ್ಮಾನ ಮಾಡುತ್ತದೆ. ನನ್ನನ್ನು ಅವರು ಸಂಪರ್ಕ ಮಾಡಿಲ್ಲ. ನಿನ್ನೆ ತಾನೆ ಭೇಟಿ ಮಾಡಿದ್ದೆವು. ಆದರೆ ಪಕ್ಷ ಸೇರ್ಪಡೆಯಾಗುವ ವಿಚಾರದಲ್ಲಿ ಯಾವುದೇ ಮಾತುಕತೆ ಮಾಡಿಲ್ಲ. ಪಕ್ಷ ಸೇರ್ಪಡೆ ವಿಚಾರ ನನ್ನೊಬ್ಬನ ತೀರ್ಮಾನ ಅಲ್ಲ. ಪಕ್ಷದ ಸಿದ್ದಾಂತವನ್ನು ಒಪ್ಪಿ ಬಂದರೆ ಸ್ವಾಗತ ಎಂದರು.
ಡಿಕೆಶಿ ಪ್ರಕರಣ ವಾಪಸ್ ಪಡೆದ ಬಗ್ಗೆ ಸಚಿವರ ಪ್ರತಿಕ್ರಿಯೆ ಏನು : ಡಿ ಕೆ ಶಿವಕುಮಾರ್ ಪ್ರಕರಣವನ್ನು ಸಿಬಿಐನಿಂದ ವಾಪಸ್ ಪಡೆದಿದ್ದು, ಅದು ರಾಜಕೀಯ ಸೇಡಿಗಾಗಿ ಮಾಡಿದಂತಹ ಕ್ರಮವಾಗಿತ್ತು. ಹೀಗಾಗಿ ಅದನ್ನು ವಾಪಸ್ ಪಡೆದಿದ್ದೇವೆ. ಎಲ್ಲರ ಒಮ್ಮತದಿಂದ ಸಚಿವ ಸಂಪುಟದಲ್ಲಿ ನಿರ್ಧಾರ ತೆಗೆದುಕೊಳ್ಳಲಾಗಿದೆ. ಇದು ಕಾನೂನಾತ್ಮಕ ವಿಚಾರ. ಅಂದಿನ ಸಿಎಂ ಓರಲ್ ಇನ್ಸ್ಟ್ರಕ್ಷನ್ ಮೂಲಕ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಹೇಳಿದ್ದಾರೆ.
ಅಂದಿನ ಅಡ್ವೋಕೆಟ್ ಜನರಲ್ ಅವರ ಅಭಿಪ್ರಾಯವನ್ನು ಪಡೆಯುವುದಕ್ಕೂ ಮುನ್ನ ಸರ್ಕಾರ ಈ ಪ್ರಕರಣವನ್ನು ಸಿಬಿಐಗೆ ವಹಿಸಿತ್ತು. ಆಗ ಡಿ ಕೆ ಶಿವಕುಮಾರ್ ಶಾಸಕರಾಗಿದ್ದರು. ಶಾಸಕರಾದ ಮೇಲೆ ತನಿಖೆ ಮಾಡಬೇಕಾದರೆ ಸ್ಪೀಕರ್ ಅನುಮತಿ ಬೇಕು. ಅಡ್ವೋಕೇಟ್ ಜನರಲ್ ವರದಿ ಕೈ ಸೇರುವ ಮುನ್ನ ಮುಖ್ಯ ಕಾರ್ಯದರ್ಶಿ ತನಿಖೆಗೆ ಅನುಮತಿ ನೀಡಿದ್ದಾರೆ. ಆದರೆ ಈಗ ನಾವು ಅಡ್ವೋಕೇಟ್ ಜನರಲ್ ಅಭಿಪ್ರಾಯ ಪಡೆದು, ಡಿ ಕೆ ಶಿವಕುಮಾರ್ ಪ್ರಕರಣವನ್ನು ಸಿಬಿಐನಿಂದ ವಾಪಸ್ ಪಡೆದಿದ್ದೇವೆ ಎಂದು ತಿಳಿಸಿದರು.
ಎಲ್ಲವನ್ನೂ ಲೀಗಲ್ ವ್ಯಾಪ್ತಿಯಲ್ಲಿ ನೋಡಿ. ಅದು ರಾಜಕೀಯವಾದಂತಹ ಹಾಗೂ ಕಾನೂನಿನ ಯಾವ ಅಂಶವನ್ನು ಗಮನದಲ್ಲಿರಿಸದೇ ಮಾಡಿರುವ ನಿರ್ಧಾರ ಇದು. ವಿರೋಧ ಪಕ್ಷಗಳು ಇರುವುದೇ ಟೀಕೆ ಮಾಡಲು. ಕಾನೂನು ಬಾಹಿರವಾಗಿ ಮಾಡಿರುವ ನಿರ್ಧಾರವನ್ನು ನಾವು ವಿಥ್ ಡ್ರಾ ಮಾಡಿದ್ದೇವೆ. ಇದರಲ್ಲಿ ಸರ್ಕಾರ ಯಾರನ್ನು ರಕ್ಷಣೆ ಮಾಡುವ ಪ್ರಶ್ನೆಯೇ ಇಲ್ಲ ಎಂದು ಸಿಬಿಐನಿಂದ ಪ್ರಕರಣವನ್ನು ವಾಪಸ್ ಪಡೆಯುವ ಸಚಿವ ಸಂಪುಟ ನಿರ್ಧಾರವನ್ನು ಸಚಿವರು ಸಮರ್ಥನೆ ಮಾಡಿಕೊಂಡರು.
ಜಾತಿ ಗಣತಿ ವರದಿ ಕೈ ಸೇರುವ ಮುನ್ನವೇ ವಿರೋಧ ಏಕೆ : ಜಾತಿ ಗಣತಿ ವರದಿ ಇನ್ನೂ ಸರ್ಕಾರಕ್ಕೆ ಸಲ್ಲಿಕೆ ಆಗಿಲ್ಲ. ಊಹೆ ಮಾಡಿ, ವಿರೋಧ ಮಾಡಿದರೆ ಹೇಗೆ ಪ್ರತಿಯೊಬ್ಬರಿಗೂ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಸಮಾನತೆ ಸಿಗಬೇಕು. ಅದಕ್ಕಾಗಿ ನಮ್ಮ ಸರ್ಕಾರ ಹಿಂದೆ ಇದ್ದಾಗ ಸಮೀಕ್ಷೆ ನಡೆಸಲಾಗಿತ್ತು. ಮಧ್ಯ ನಮ್ಮ ಸರ್ಕಾರ ಇರಲಿಲ್ಲ. ಈಗ ಜಾತಿ ಗಣತಿ ವರದಿ ಸ್ವೀಕಾರ ಆಗಬೇಕು. ಅಂತಿಮ ವರದಿ ಸಲ್ಲಿಕೆಗೆ ಸಮಯಾವಕಾಶ ಕೇಳಿದ್ದಾರೆ. ಆಗಲೇ ವರದಿಯಲ್ಲಿ ಏನಿದೆ ಎಂದು ಯಾರು ನೋಡಿಲ್ಲ. ಸರ್ಕಾರದ ಕೈ ಸೇರುವ ಮುನ್ನವೇ ವಿರೋಧ ಏಕೆ. ಅದೆಲ್ಲಾ ಹೊರಗಿನ ನಿರ್ಧಾರ. ಸಚಿವ ಸಂಪುಟ ತೆಗೆದುಕೊಳ್ಳುವ ತೀರ್ಮಾನ ಮಾತ್ರ ಸರ್ಕಾರದ ತೀರ್ಮಾನ ಆಗಿದೆ ಎಂದು ಜಾತಿ ಗಣತಿ ವರದಿ ವಿರೋಧಿಸುವವರಿಗೆ ಸಚಿವ ಡಾ ಹೆಚ್ ಸಿ ಮಹಾದೇವಪ್ಪ ಪರೋಕ್ಷವಾಗಿ ತಿರುಗೇಟು ನೀಡಿದರು.
ಇದನ್ನೂ ಓದಿ :ಡಿಕೆಶಿ ಪ್ರಕರಣ: ಹಿಂದಿನ ಸರ್ಕಾರ ಕಾನೂನುಬದ್ಧ ಕ್ರಮ ಅನುಸರಿಸಿಲ್ಲ- ಸಿಎಂ ಸಿದ್ದರಾಮಯ್ಯ