ಮೈಸೂರು:ಯಾವುದೇ ಜಾತಿ ಹಾಗೂ ಹಣದ ಬೆಂಬಲವಿಲ್ಲದೆ ಪ್ರಜಾಪ್ರಭುತ್ವವನ್ನು ಅನುಷ್ಠಾನಗೊಳಿಸಿ ದೇಶ ಮುನ್ನಡೆಸುವುದನ್ನು ದೇವರಾಜ ಅರಸು ತಮ್ಮ ಆಡಳಿತದ ಮೂಲಕ ಜಗತ್ತಿಗೆ ತೋರಿಸಿಕೊಟ್ಟಿದ್ದಾರೆ ಎಂದು ಸಮಾಜ ಕಲ್ಯಾಣ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಹೆಚ್ ಸಿ ಮಹದೇವಪ್ಪ ತಿಳಿಸಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಹಯೋಗದಲ್ಲಿ ಭಾನುವಾರ ಕಲಾಮಂದಿರದಲ್ಲಿ ಹಮ್ಮಿಕೊಳ್ಳಲಾಗಿದ್ದ ಮಾಜಿ ಮುಖ್ಯಮಂತ್ರಿ ಡಿ. ದೇವರಾಜ ಅರಸರ 108ನೇ ಜಯಂತಿ ಕಾರ್ಯಕ್ರಮ ಉದ್ಘಾಟಿಸಿದ ಬಳಿಕ, ಅರಸು ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ, ಸಚಿವರು ಮಾತನಾಡಿದರು. ಭಾರತದ ರಾಜಕೀಯ ಇಂದು ಜಾತಿ, ಹಣದ ಮೇಲೆ ನಿಂತಿದೆ. ಜಾತಿ, ಧರ್ಮದ ಹೆಸರಿನಲ್ಲಿ ಜನರನ್ನು ವಿಭಜಿಸಿ, ಗೊಂದಲ ಸೃಷ್ಟಿ ಮಾಡಿ, ಸಂವಿಧಾನದ ಆಶಯಗಳಿಗೆ ಭಂಗ ಉಂಟುಮಾಡುತ್ತಿರುವ ಸಂದರ್ಭದಲ್ಲಿ ರಾಜಕೀಯ ಅಧಿಕಾರವು ಹಣ ಮತ್ತು ಜಾತಿ ಬಲವುಳ್ಳವರ ಕೈಗೆ ಸಿಗದಂತೆ ಎಚ್ಚರವಹಿಸಬೇಕು ಎಂದು ಸಂದೇಶ ನೀಡಿದರು.
ದೇಶದ ಬೆನ್ನೆಲುಬಾದ ರೈತರ ಬಗ್ಗೆ ಅಪಾರ ಆಸಕ್ತಿ ಹೊಂದಿದ್ದ ಅರಸರು, ಗ್ರಾಮೀಣ ಬದುಕಿನ ಎಲ್ಲಾ ಮಜಲುಗಳನ್ನು ಅರ್ಥಮಾಡಿಕೊಂಡಿದ್ದರು. ಸಾಮಾಜಿಕ ಹೋರಾಟ, ಸಂಘರ್ಷ, ಸ್ವಾತಂತ್ರ್ಯ ಚಳುವಳಿಯೊಂದಿಗೆ ಜನಸಾಮಾನ್ಯರ ಜೊತೆ ಬದುಕಿದ ಅನುಭವಗಳು ಅವರನ್ನು ಸಹಜವಾಗಿ ಮುತ್ಸದಿಯಾಗಿ ಪರಿವರ್ತಿಸಿತು. ಅವರು ಮುಂದಿನ ಜನಾಂಗದ ಭವಿಷ್ಯದ ಬಗ್ಗೆ ಚಿಂತಿಸಿ, ಸಾಮಾಜಿಕ ಬದುಕುಗಳ ಸ್ಥೂಲ ಪರಿಚಯದಿಂದ ಅನೇಕ ಬದಲಾವಣೆ ತಂದರು. ಅವರನ್ನು ರಾಜಕಾರಣಿ ಎನ್ನುವುದಕ್ಕಿಂತ ಅವರೊಬ್ಬರು ಸಮಾಜ ಸುಧಾರಕ, ಸಾಮಾಜಿಕ ಚಿಂತಕ, ಸಮಾಜಶಾಸ್ತ್ರದ ಶ್ರೇಷ್ಠ ವೈದ್ಯರು ಎಂದು ಹೇಳಿದರು.
ಇತಿಹಾಸದಲ್ಲಿ ಚಿರಸ್ಥಾಯಿಯಾಗಿ ಉಳಿದಿದ್ದಾರೆ:ಚಲನೆ ಇಲ್ಲದ ಸಮಾಜಕ್ಕೆ ಚಲನಶೀಲತೆಯನ್ನು ಉಂಟುಮಾಡಿ ಅಲೆ ಹಬ್ಬಿಸಿದರು. ಬಹಳಷ್ಟು ಸವಾಲುಗಳು ಎದುರಾದರೂ ಹಾವನೂರು ಆಯೋಗದ ವರದಿ ಜಾರಿ ಮಾಡುವ ಮೂಲಕ ಹಿಂದುಳಿದ ವರ್ಗಗಳಿಗೆ ಮೀಸಲಾತಿ ಜಾರಿ ಮಾಡಿದರು. ಶೈಕ್ಷಣಿಕ ಮತ್ತು ಔದ್ಯೋಗಿಕವಾಗಿ ಮುಕ್ತ ಅವಕಾಶ ನೀಡಿದರು. ಹೀಗಾಗಿ ಅವರು ರಾಜ್ಯದ ಇತಿಹಾಸದಲ್ಲಿ ಚಿರಸ್ಥಾಯಿಯಾಗಿ ಉಳಿದಿದ್ದಾರೆ ಎಂದು ಹೇಳಿದರು.