ಮೈಸೂರು: ಕುಂತವರು ನಿಂತವರು ಯಾರ್ಯಾರೋ ಸಿಎಂ ಹುದ್ದೆಯನ್ನ ಕೇಳುತ್ತಿದ್ದಾರೆ. ಸಿಎಂ ಹುದ್ದೆ ಎಂದರೆ ಎಲ್ಲರಿಗೂ ಅಷ್ಟು ಹಗುರವಾಗಿ ಹೋಯ್ತಾ? ಆ ಹುದ್ದೆಗೆ ದೊಡ್ಡ ಗೌರವವಿದೆ ಎಂದು ಮಾಜಿ ಸಚಿವ ಡಾ. ಹೆಚ್. ಸಿ. ಮಹದೇವಪ್ಪ ಹೇಳಿದರು.
ಮಾಜಿ ಸಚಿವ ಡಾ. ಹೆಚ್. ಸಿ. ಮಹದೇವಪ್ಪ ಅವರು ಸಿಎಂ ಹುದ್ದೆ ಕುರಿತು ಮಾತನಾಡಿದರು. ಮೈಸೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿ, ಹೋರಾಟ, ಸಾಮಾಜಿಕ ಬದ್ಧತೆ, ರಾಜಕೀಯ ಜೀವನದ ಅನುಭವ ಎಲ್ಲವೂ ಸಿಎಂ ಹುದ್ದೆಗೆ ಬೇಕು. ಕಾಂಗ್ರೆಸ್ನಲ್ಲಿ ಸಿಎಂ ಹುದ್ದೆಯ ಚರ್ಚೆಗಳಿದ್ದರೂ ಹಗುರವಾಗಿ ಸಿಎಂ ಹುದ್ದೆ ಬಗ್ಗೆ ಮಾತನಾಡುತ್ತಿಲ್ಲ. ಬೇರೆ ಪಕ್ಷಗಳಲ್ಲಿ ಆ ಹುದ್ದೆಯ ಬಗ್ಗೆ ಬಹಳ ಹಗುರವಾಗಿ ಯಾರ್ಯೋರೋ ನಾನು ಸಿಎಂ, ನಾನು ಸಿಎಂ ಎನ್ನುತ್ತಿದ್ದಾರೆ ಎಂದರು.
ನಮ್ಮ ಪಕ್ಷದಲ್ಲಿಯೇ ಯಾರು ಸಿಎಂ ಆಗಬೇಕು ಎನ್ನುವುದು ಪಕ್ಷದ ಹೈಕಮಾಂಡ್ ನಿರ್ಧಾರ ಮಾಡುತ್ತದೆ. ಹೈಕಮಾಂಡ್ ನಿರ್ಧಾರಕ್ಕೆ ನಾವೆಲ್ಲ ಬದ್ದ. ಮೊದಲು ನಮಗೆ 130 ಸೀಟು ಬರಬೇಕು. ನಂತರ ಶಾಸಕರು ಹೈಕಮಾಂಡ್ ಆ ಬಗ್ಗೆ ತೀರ್ಮಾನ ಮಾಡುತ್ತದೆ ಎಂದು ಹೇಳಿದರು.
ಸಿದ್ದರಾಮಯ್ಯ ಅಮೃತ ಮಹೋತ್ಸವವನ್ನು ಸಿಎಂ ಹುದ್ದೆಯನ್ನು ಕೇಳುವುದಕ್ಕಾಗಿ ಮಾಡುತ್ತಿಲ್ಲ. ಯಾವ ಜಯಂತಿ ಸಮಾರಂಭಗಳ ಮೂಲಕ ಸಿಎಂ ಹುದ್ದೆಯನ್ನ ಕೇಳುವುದಕ್ಕೆ ಆಗುವುದಿಲ್ಲ ಎಂದು ಹೆಚ್ಸಿ ಮಹದೇವಪ್ಪ ವಿರೋಧಿಗಳಿಗೆ ತಿರುಗೇಟು ನೀಡಿದರು.
ಸುಮ್ಮನೆ ಟೀಕೆ ಮಾಡುತ್ತಿದ್ದಾರೆ: ಬಿಜೆಪಿ ಮೊಸರಲ್ಲಿ ಕಲ್ಲು ಹುಡುಕುವ ಕೆಲಸ ಮಾಡುತ್ತಿದೆ. ತಮ್ಮ ದುರಾಡಳಿತವನ್ನ ಮುಚ್ಚಿಕೊಳ್ಳಲು ಸಿದ್ದರಾಮಯ್ಯ ಜನ್ಮ ದಿನದ ಬಗ್ಗೆ ಸುಮ್ಮನೆ ಟೀಕೆ ಮಾಡುತ್ತಿದ್ದಾರೆ. ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ಕನಸಿನಲ್ಲಿಯೂ ಕಾಂಗ್ರೆಸ್ ಕಾಡುತ್ತಿದೆ. 2023ಕ್ಕೆ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತದೆ ಎಂಬ ಚಿಂತೆಯಲ್ಲಿ ಬೊಮ್ಮಾಯಿ ಏನೇನೋ ಮಾತನಾಡುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.
ನಾವೇನು ಮಾಡೋದಕ್ಕೆ ಆಗುತ್ತದೆ:ನಾವು ಸಿದ್ದರಾಮೋತ್ಸವ ಅಂತ ಎಂದೂ ಕರೆದಿಲ್ಲ. ಹಾಗಂತ ಮಾಧ್ಯಮದವರು, ಯಾರೋ ಅಭಿಮಾನಿಗಳು ಹಾಗೆ ಕರೆದಿದ್ದಾರೆ. ನಾವು ಸಿದ್ದರಾಮಯ್ಯ ಅಮೃತ ಮಹೋತ್ಸವ ಮಾಡುತ್ತಿದ್ದೇವೆ. ದೊರೆ, ರಾಜ, ಈ ಪದಗಳು ಪ್ರಜಾಪ್ರಭುತ್ವದಲ್ಲಿ ಬಳಸಬಾರದು. ಅವನ್ನು ಬಳಸಬೇಡಿ ಎಂದು ಹೇಳಬೇಕಾದವರೇ ಅದನ್ನ ಬಳಸಿದರೆ ನಾವೇನು ಮಾಡೋದಕ್ಕೆ ಆಗುತ್ತದೆ ಎಂದರು.
ಸಿದ್ದರಾಮಯ್ಯ ಅವರು ಎಂದಿಗೂ ಹುಟ್ಟುಹಬ್ಬವನ್ನು ಅದ್ದೂರಿಯಾಗಿ ಮಾಡಬೇಕು ಅಂದುಕೊಂಡವರಲ್ಲ. ಆದರೆ, ನಾವೇ ಅವರನ್ನು ಒಪ್ಪಿಸಿ ಈ ಕಾರ್ಯಕ್ರಮ ಮಾಡುತ್ತಿದ್ದೇವೆ. ಇದರಲ್ಲಿ ಪಕ್ಷಕ್ಕೂ ಹಾಗೂ ಸಮಾರಂಭಕ್ಕೂ ಯಾವುದೇ ಸಂಬಂಧ ಇಲ್ಲ ಎಂದು ತಿಳಿಸಿದರು.
ಓದಿ:ಸಂತೋಷ್ ಪಾಟೀಲ ಆತ್ಮಹತ್ಯೆ ಪ್ರಕರಣದಲ್ಲಿ ಬಿ ರಿಪೋರ್ಟ್ ಸಲ್ಲಿಕೆ : ಆರೋಪದಿಂದ ಮುಕ್ತನಾಗಿದ್ದೇನೆ ಎಂದ ಈಶ್ವರಪ್ಪ