ಮೈಸೂರು:ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ರಾಜೀನಾಮೆಗೆ ಒತ್ತಾಯಿಸುತ್ತಿರುವ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಅವರಿಗೆ ನೈತಿಕತೆಯಿಲ್ಲವೆಂದು ಉಪ ಮುಖ್ಯಮಂತ್ರಿ ಡಾ.ಅಶ್ವತ್ಥ್ ನಾರಾಯಣ್ ತಿರುಗೇಟು ನೀಡಿದ್ದಾರೆ.
ಉಪ ಮುಖ್ಯಮಂತ್ರಿ ಡಾ.ಅಶ್ವತ್ಥ್ ನಾರಾಯಣ್ ಮಾತನಾಡಿದರು ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಅವರ ಅವಧಿಯಲ್ಲಿ ನೆರೆ ಸಂತ್ರಸ್ತರಿಗೆ ಯಾವ ರೀತಿ ಸ್ಪಂದಿಸಿದ್ದಾರೆ ಎಂಬುದು ಗೊತ್ತು. ಅಂದು ಅವರು ಯಾವ ಪ್ರವಾಸವನ್ನೂ ಮಾಡಲಿಲ್ಲ. ಇವತ್ತು ಹೇಳಿಕೆ ಕೊಡಬೇಕು ಅಂತ ಕೊಟ್ಟಿದ್ದಾರೆ ಅಷ್ಟೇ ಎಂದು ವ್ಯಂಗ್ಯವಾಡಿದರು.
ನೆರೆ ಸಂತ್ರಸ್ತರಿಗೆ ಕೇಂದ್ರ ಸರ್ಕಾರದ ಎನ್‌ಡಿಆರ್‌ಎಫ್ ಗೈಡ್‌ಲೈನ್ ಪ್ರಕಾರ ಹಣ ಬಿಡುಗಡೆ ಆಗುತ್ತೆ. ಇದು ಎಲ್ಲಾ ರಾಜ್ಯಗಳು ಒಪ್ಪಿ ಮಾಡಿರುವ ಗೈಡ್‌ಲೈನ್ಸ್ ಆಗಿದ್ದು, ಈಗಾಗಲೇ ತುರ್ತು ಪರಿಹಾರ ನೀಡಲಾಗುತ್ತಿದೆ. ಹತ್ತು ವರ್ಷದಲ್ಲಿ ಕಾಂಗ್ರೆಸ್ ಸರ್ಕಾರ ನೀಡಿದ ಪರಿಹಾರದ ಮೊತ್ತವನ್ನ ನಮ್ಮಕೇಂದ್ರ ಸರ್ಕಾರ ಒಂದೇ ಅವಧಿಯಲ್ಲಿ ರಿಲೀಸ್ ಮಾಡಿದೆ ಎಂದರು.
ನವೆಂಬರ್ 1 ರಿಂದ ಕಾಲೇಜು ಪ್ರಾರಂಭಿಸಲು ಯುಜಿಸಿ ಗೈಡ್‌ಲೈನ್ಸ್‌ನಲ್ಲಿ ಅವಕಾಶ ಇದೆ. ಈ ನಿಟ್ಟಿನಲ್ಲಿ ಸಾಕಷ್ಟು ಸಭೆಗಳು, ಪೂರ್ವ ಸಿದ್ದತೆಗಳು ನಡೆಯುತ್ತಿವೆ. ಶೀಘ್ರದಲ್ಲೇ ಕಾಲೇಜು ಆರಂಭದ ದಿನಾಂಕ ಘೊಷಣೆಯಾಗಲಿದೆ.ಈಗಾಗಲೇ ಆನ್‌ಲೈನ್ ಕ್ಲಾಸ್ ನಡೆಯುತ್ತಿದೆ. ಆಫ್‌ಲೈನ್ ಕ್ಲಾಸ್‌ಗೂ ವಿದ್ಯಾರ್ಥಿಗಳ ಅಪೇಕ್ಷೆ ಇದೆ. ಆ ನಿಟ್ಟಿನಲ್ಲಿ ಆಫ್‌ಲೈನ್ ಕ್ಲಾಸ್‌ಗೆ ಕ್ರಮ ಕೈಗೊಳ್ಳುತ್ತೇವೆ ಎಂದ ಅವರು, ಕಾಲೇಜುಗಳ ಆರಂಭದ ಸಿದ್ಧತೆಗಳ ಬಗ್ಗೆ ಶೀಘ್ರದಲ್ಲೇ ಮಾಹಿತಿ ನೀಡಲಾಗುವುದು ಎಂದು ತಿಳಿಸಿದರು.
ಶಿರಾ, ಆರ್‌ಆರ್ ನಗರ ಉಪ ಚುನಾವಣೆ ಎರಡೂ ಕ್ಷೇತ್ರಗಳಲ್ಲಿ ದೊಡ್ಡ ಅಂತರದಲ್ಲಿ ಬಿಜೆಪಿ ಗೆಲ್ಲಲಿದೆ. ಸ್ಥಿರವಾದ ಸರ್ಕಾರ ಬೇಕು ಅಂತ ಜನರ ಅಪೇಕ್ಷೆ ಇದೆ. ಕಳೆದ ಮೈತ್ರಿ ಸರ್ಕಾರದ ಕಚ್ಚಾಟದಿಂದ ಜನ ಬೇಸತ್ತಿದ್ದರು. ಈಗ ಕಾಂಗ್ರೆಸ್ ಜೆಡಿಎಸ್- ಪರಸ್ಪರ ಆರೋಪ ಪ್ರತ್ಯಾರೋಪದಲ್ಲಿ ತೊಡಗಿವೆ. ಶಿರಾದಲ್ಲಿ ಬೇರೆ ಪಕ್ಷಕ್ಕೆ ಮತ ನೀಡುವುದರಿಂದ ಏನು ಉಪಯೋಗವಿಲ್ಲ ಎಂದು ಹೇಳಿದರು.
ಕಾಂಗ್ರೆಸ್ ಅಭ್ಯರ್ಥಿ ಆಯ್ಕೆ ಬಗ್ಗೆ ನಾಯಕರ ಆಡಿಯೋ ರಿಲೀಸ್ ಆಗಿದೆ. ಜೆಡಿಎಸ್ ಭಾವನಾತ್ಮವಾಗಿ ಮತ ಸೆಳೆಯಲು ಸಾಧ್ಯವಿಲ್ಲ. ಜವಾಬ್ದಾರಿ ಸ್ಥಾನ ನಿರ್ವಹಿಸದ ಕಾಂಗ್ರೆಸ್, ಜೆಡಿಎಸ್‌ಗೆ ಯಾವ ಪ್ರತಿಷ್ಠೆಯೂ ಇಲ್ಲ. ತಮ್ಮ ಕಾರ್ಯದ ಮೂಲಕ ಜನರ ವಿಶ್ವಾಸ ಗಳಿಸಬೇಕೆ ಹೊರತು ಪ್ರತಿಷ್ಠೆಯಿಂದ ಅಲ್ಲ ಎಂದು ಡಿಸಿಎಂ ಎರಡೂ ಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದರು.