ಮೈಸೂರು: ಮಹಿಳೆ ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ಪಿರಿಯಾಪಟ್ಟಣ ತಾಲೂಕಿನ ಹಿಟ್ನಹಳ್ಳಿ ಗ್ರಾಮದಲ್ಲಿ ನಡೆದಿದ್ದು, ಇದೊಂದು ವರದಕ್ಷಿಣೆ ಕಿರುಕುಳವೆಂದು ಮೃತಳ ಸಹೋದರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಗೃಹಿಣಿ ಅನುಮಾನಾಸ್ಪದ ಸಾವು, ಕೊಲೆ ಆರೋಪ: ದೂರು ದಾಖಲು - ಮೈಸೂರಲ್ಲಿ ವರದಕ್ಷಿಣೆ ಕಿರುಕುಳ
ವರದಕ್ಷಿಣೆ ಕಿರುಕುಳದಿಂದ ತಮ್ಮ ಸಹೋದರಿ ಮೃತಪಟ್ಟಿದ್ದಾಳೆ ಎಂದು ಪೊಲೀಸ್ ಠಾಣೆಯಲ್ಲಿ ಮೃತರ ಸಹೋದರ ದೂರು ದಾಖಲಿಸಿದ್ದಾರೆ.
ಘಟನೆ ವಿವರ: ತಾಲೂಕಿನ ನಾರಳಾಪುರ ಗ್ರಾಮದ ಈರಪ್ಪಾಜಿ ಅವರ ಪುತ್ರಿ ಸುನೀತಾ(26) ಎಂಬುವರನ್ನು ಹಿಟ್ನಹಳ್ಳಿ ಗ್ರಾಮದ ಸಂಬಂಧಿಕ ಮಂಜುಗೆ 2020 ರ ಮಾ.15 ರಂದು ವಿವಾಹ ಮಾಡಿಕೊಡಲಾಗಿತ್ತು. ಫೆ.14 ರ ಬೆಳಿಗ್ಗೆ ಹಿಟ್ನಹಳ್ಳಿ ಗ್ರಾಮದಲ್ಲಿ ಬೆಂಕಿಯಲ್ಲಿ ಸುಟ್ಟ ಸ್ಥಿತಿಯಲ್ಲಿ ಗಾಯಗೊಂಡಿದ್ದ ಸುನೀತಾರನ್ನು ಪಟ್ಟಣದ ಸಾರ್ವಜನಿಕ ಆಸ್ಪತ್ಸೆಗೆ ಕರೆ ತಂದು ಹೆಚ್ಚಿನ ಚಿಕಿತ್ಸೆಗೆಂದು ಮೈಸೂರಿಗೆ ದಾಖಲಿಸಲಾಗಿತ್ತು. ಮಧ್ಯಾಹ್ನ ವೇಳೆಗೆ ಚಿಕಿತ್ಸೆ ಫಲಕಾರಿಯಾಗದೆ ಸುನೀತ ಮೃತಪಟ್ಟಿದ್ದರು .
ವಾಯ್ಸ್ ಮೆಸೇಜ್ನಿಂದ ಸುಳಿವು: ಸುನೀತಾ ತನ್ನ ಗಂಡನ ಮೊಬೈಲ್ನಿಂದ ಸಹೋದರ ಸುನೀಲ್ ಕುಮಾರ್ನ ಸ್ನೇಹಿತ ಮಣಿಕಂಠನ ಮೊಬೈಲ್ಗೆ ನನಗೆ ನನ್ನ ಪತಿ ಮಂಜು, ಮಾವ ರಾಜಪ್ಪ ಮತ್ತು ಅತ್ತೆ ಶಿವಮ್ಮ ಅವರು ಕಿರುಕುಳ ನೀಡುತ್ತಿದ್ದು, ನಾನು ಮೃತಪಟ್ಟರೆ ಅವರೇ ಕಾರಣ. ಅವರನ್ನು ಬಿಡಬೇಡಿ ಜೈಲಿಗೆ ಕಳುಹಿಸಿ ಎಂದು ವಾಯ್ಸ್ ಮೆಸೇಜ್ ಕಳಿಸಿದ್ದಾರೆ ಎಂದು ತಿಳಿದುಬಂದಿದೆ. ಫೆ.15 ರಂದು ಮೃತರ ಅಂತ್ಯಕ್ರಿಯೆ ನಂತರ ಈ ವಿಚಾರ ತಿಳಿದ ಸುನೀಲ್ ಕುಮಾರ್, ತನ್ನ ತಂಗಿಯ ಸಾವಿಗೆ ವರದಕ್ಷಿಣೆ ಕಿರುಕುಳ ಕಾರಣ ಎಂದು ಪಟ್ಟಣದ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಈ ಸಂಬಂಧ ಸುನೀತಾಳ ಗಂಡ ಮಂಜನನ್ನು ಬಂಧಿಸಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.