ಮೈಸೂರು: ಮೈಸೂರಿನ ಪ್ರೇಕ್ಷಣೀಯ ಸ್ಥಳಗಳ ವೀಕ್ಷಣೆಗಾಗಿ ಪ್ರವಾಸೋದ್ಯಮ ಇಲಾಖೆಯು 6 ಡಬಲ್ ಡೆಕ್ಕರ್ ಬಸ್ಗಳನ್ನು ನೀಡಲು ನಿರ್ಧರಿಸಿದ್ದು, ಮಾರ್ಚ್ ಅಂತ್ಯಕ್ಕೆ ಬಸ್ಗಳು ಸಂಚಾರ ಆರಂಭಿಸಲಿವೆ.
ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮವು 6 ಡಬಲ್ ಡೆಕ್ಕರ್ ಬಸ್ಗಳನ್ನು ನೀಡಲು ನಿರ್ಧರಿಸಿದ್ದು, ಇದರಲ್ಲಿ 1 ಬಸ್ ಮಾರ್ಚ್ ಅಂತ್ಯದಲ್ಲಿ ರಸ್ತೆಗಿಳಿಯಲಿದೆ. ನೂತನ ಬಸ್ಗಳಿಗೆ ಅಂಬಾರಿ ಎಂದು ಹೆಸರಿಡಲು ತೀರ್ಮಾನಿಸಲಾಗಿದೆ.
ಮೈಸೂರಿನ ಪ್ರವಾಸೋಧ್ಯಮ ಇಲಾಖೆ ಕಚೇರಿ ಈ ಬಗ್ಗೆ ದೂರವಾಣಿ ಮೂಲಕ ಮಾಹಿತಿ ನೀಡಿದ ಪ್ರವಾಸೋದ್ಯಮ ಇಲಾಖೆ ಉಪನಿರ್ದೇಶಕ ಜನಾರ್ದನ್, ಮೊದಲು ಹಂಪಿಗೆ 2 ಹಾಗೂ ಮೈಸೂರಿಗೆ 4 ಬಸ್ ನೀಡಲು ನಿರ್ಧರಿಸಲಾಗಿತ್ತು. ಆದರೆ ಈಗ 6 ಬಸ್ಗಳನ್ನು ಮೈಸೂರಿಗೆ ನೀಡಲಾಗುತ್ತಿದೆ. ನಂತರ ಹಂಪಿಗೆ ನೀಡುವ ತೀರ್ಮಾನ ಕೈಗೊಳ್ಳಲಾಗಿದೆ. ಈ ರೀತಿಯ ಬಸ್ ಹೊಂದುತ್ತಿರುವ ರಾಜ್ಯದ ಮೊದಲ ನಗರಿ ಎಂಬ ಕೀರ್ತಿಗೆ ಸಾಂಸ್ಕೃತಿಕ ನಗರಿ ಪಾತ್ರವಾಗಲಿದೆ ಎಂದು ತಿಳಿಸಿದರು.
ಡಬಲ್ ಡೆಕ್ಕರ್ ಬಸ್ನ ವಿಶೇಷತೆಗಳು: ವಿಶೇಷ ಡಬಲ್ ಡೆಕ್ಕರ್ ಬಸ್ ಒಟ್ಟು 40 ಆಸನಗಳನ್ನು ಹೊಂದಿದೆ. ಒಂದೂವರೆ ಗಂಟೆ ಅವಧಿಯಲ್ಲಿ ನಗರದ ಪ್ರಮುಖ ಸ್ಥಳಗಳಿಗೆ ಭೇಟಿ ನೀಡಬಹುದು. ಮೈಸೂರು ಅರಮನೆ, ಚಾಮರಾಜೇಂದ್ರ ಮೃಗಾಲಯ, ಕಾರಂಜಿಕೆರೆ, ಸಿ.ಎಫ್.ಟಿ.ಆರ್.ಐ ಸೇರಿದಂತೆ ಇನ್ನುಳಿದ ಪ್ರೇಕ್ಷಣೀಯ ಸ್ಥಳಗಳಿಗೆ ಬಸ್ ಸಂಚರಿಸುವ ವ್ಯವಸ್ಥೆ ಮಾಡಲಾಗಿದೆ. ಮಾರ್ಚ್ 10 ರ ವೇಳೆಗೆ ಬಸ್ ಸಂಚಾರ ಆರಂಭವಾಗಲಿದೆ.