ಮೈಸೂರು: ಕೋಡಿ ಮಠದ ಸ್ವಾಮೀಜಿ, ಹೆಚ್. ಡಿ. ಕುಮಾರಸ್ವಾಮಿ ಹಾಗೂ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿಕೆಯನ್ನ ಯಾರೂ ಗಂಭೀರವಾಗಿ ಪರಿಗಣಿಸಬೇಡಿ. ಅವರ ಹೇಳಿಕೆಗಳಲ್ಲಿ ಯಾವುದೇ ನಿಖರತೆ ಹಾಗೂ ಸ್ಪಷ್ಟತೆ ಇರುವುದಿಲ್ಲ ಎಂದು ಸಂಸದ ಪ್ರತಾಪ್ ಸಿಂಹ ಹೇಳಿದರು. ನಗರದ ಬಿಜೆಪಿ ಕಚೇರಿಯಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಈ ಮೂವರ ಹೇಳಿಕೆ ಅಸ್ಪಷ್ಟವಾಗಿರುತ್ತವೆ. ಆದ್ದರಿಂದ ಜನರು ಕೂಡ ಇವರ ಹೇಳಿಕೆಯನ್ನ ಗಂಭೀರವಾಗಿ ಪರಿಗಣಿಸಬಾರದು ಎಂದು ಸಂಸದ ಪ್ರತಾಪ್ ಸಿಂಹ ತಿಳಿಸಿದರು.
ಸಿಎಂ ದುಡಿಯುವ ಬಸವಣ್ಣ: ಸಿಎಂ ಬಸವರಾಜ ಬೊಮ್ಮಾಯಿ ಅವರು ಮೌನ ಮುರಿಯಬೇಕು ಎಂಬ ಪ್ರತಿಪಕ್ಷಗಳ ಟೀಕೆಗೆ ಉತ್ತರಿಸಿದ ಸಂಸದ ಪ್ರತಾಪ್ ಸಿಂಹ, ಬಸವರಾಜ ಬೊಮ್ಮಾಯಿ ಅವರು ಮಾತನಾಡುವ ಬಸವಣ್ಣನಲ್ಲ, ದುಡಿಯುವ ಬಸವಣ್ಣ. ಮೈಸೂರು ಏರ್ಪೋರ್ಟ್ ವಿಸ್ತರಣೆಗೆ ಅನುದಾನ, ಕೆ.ಆರ್ ಆಸ್ಪತ್ರೆಗೆ ಅನುದಾನ, ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ನೀಡಬೇಕು ಎಂಬ ಕಾರಣಕ್ಕಾಗಿ ಅಭಿವೃದ್ಧಿ ಪರ ಕೆಲಸ ಮಾಡುತ್ತಿದ್ದಾರೆ. ಸಿಎಂ ಬೊಮ್ಮಾಯಿ ಅವರು ದುಡಿಮೆಯೇ ತನ್ನ ಪರವಾಗಿ ಮಾತನಾಡುವ ಹಾಗೆ ಕೆಲಸ ಮಾಡುವ ಬಸವಣ್ಣ. ಪ್ರತಿ ನಿತ್ಯ ಕರ್ಕಶ ಧ್ವನಿಯಲ್ಲಿ ಕಾ ಕಾ ಎಂದು ಕೂಗುವವರಿಗೆ ಇದು ಅರ್ಥವಾಗುವುದಿಲ್ಲ ಎಂದು ಪ್ರತಿಪಕ್ಷಗಳಿಗೆ ಟಾಂಗ್ ನೀಡಿದರು.