ಮೈಸೂರು: ಒಂದು ಲಕ್ಷ ರೂ. ಸಂಬಳ ನೀಡಿದರೂ ಗುತ್ತಿಗೆ ಆಧಾರದ ಮೇಲೆ ಯಾವುದೇ ವೈದ್ಯರು ಬರುತ್ತಿಲ್ಲ ಎಂದು ಕೊರೊನಾ ಸ್ಥಿತಿಗತಿ ಸಭೆಯಲ್ಲಿ ಉಸ್ತುವಾರಿ ಸಚಿವರಿಗೆ ಶಾಸಕ ಯತೀಂದ್ರ ಸಿದ್ದರಾಮಯ್ಯ ಜಿಲ್ಲೆಯಲ್ಲಿ ಉಂಟಾಗಿರುವ ವೈದ್ಯರ ಕೊರತೆ ಬಗ್ಗೆ ಗಮನ ಸೆಳೆದರು.
1 ಲಕ್ಷ ರೂ. ಸಂಬಳ ನೀಡುತ್ತೇನೆಂದರೂ ವೈದ್ಯರು ಬರುತ್ತಿಲ್ಲ: ಶಾಸಕ ಯತೀಂದ್ರ ಸಿದ್ದರಾಮಯ್ಯ
ಮೈಸೂರು ಜಿಲ್ಲೆಯಲ್ಲಿ ವೈದ್ಯರ ಕೊರತೆ ಎದುರಾಗಿದ್ದು, ಒಂದು ಲಕ್ಷ ರೂ. ಸಂಬಳ ಕೊಡುತ್ತೇವೆ ಎಂದರೂ ವೈದ್ಯರು ಬರಲು ರೆಡಿಯಿಲ್ಲ ಎಂದು ಜಿಲ್ಲೆಯಲ್ಲಿನ ಕೊರೊನಾ ಗಂಭೀರತೆಯ ಸ್ವರೂಪವನ್ನು ಶಾಸಕ ಯತೀಂದ್ರ ಸಿದ್ದರಾಮಯ್ಯ ಇಂದು ನಡೆದ ಸಭೆಯಲ್ಲಿ ವಿವರಿಸಿದರು.
ಇಂದು ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಟಿ.ನರಸಿಪುರ, ನಂಜನಗೂಡು, ವರುಣ ವಿಧಾನಸಭಾ ಕ್ಷೇತ್ರದ ಕೊರೊನಾ ಸ್ಥಿತಿಗತಿ ಬಗ್ಗೆ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಸ್ಥಳೀಯ ಶಾಸಕರಾದ ಅಶ್ವಿನ್ ಕುಮಾರ್, ಹರ್ಷವರ್ಧನ್ ಹಾಗೂ ಶಾಸಕ ಯತೀಂದ್ರ ಸಿದ್ದರಾಮಯ್ಯ, ಮೂರು ಕ್ಷೇತ್ರಗಳ ಆರೋಗ್ಯಾಧಿಕಾರಿಗಳು ಭಾಗವಹಿಸಿದ್ದರು.
ಸಭೆಯಲ್ಲಿ ಯತೀಂದ್ರ ಸಿದ್ದರಾಮಯ್ಯ ಮಾತನಾಡಿ, ತಾಲೂಕು ಆಸ್ಪತ್ರೆಗಳಲ್ಲಿ ವೆಂಟಿಲೇಟರ್ ಹಾಗೂ ಆಕ್ಸಿಜನ್ ಕೊರತೆ ಒಂದು ಕಡೆಯಾದರೆ, ಸೋಂಕಿತರನ್ನು ನೋಡಿಕೊಳ್ಳಲು ವೈದ್ಯರ ಕೊರತೆ ಇದೆ. ಗುತ್ತಿಗೆ ಆಧಾರದಲ್ಲಿ ಒಂದು ತಿಂಗಳಿಗೆ 1 ಲಕ್ಷ ರೂ. ಸಂಬಳ ಕೊಡುತ್ತೇನೆಂದರೂ ಯಾವ ವೈದ್ಯರು ಮುಂದೆ ಬರುತ್ತಿಲ್ಲ. ಉಸ್ತುವಾರಿ ಸಚಿವರು ದಯವಿಟ್ಟು ಈ ಸಮಸ್ಯೆಯನ್ನು ರಾಜ್ಯಮಟ್ಟದಲ್ಲಿ ಪ್ರಚಾರ ಮಾಡಿದರೆ ವೈದ್ಯರು ಸಿಗಬಹುದು ಎಂದು ಶಾಸಕ ಯತೀಂದ್ರ ಸಿದ್ದರಾಮಯ್ಯ ಮೈಸೂರು ಜಿಲ್ಲೆಯಲ್ಲಿ ತಾಲೂಕು ಕೇಂದ್ರಗಳಲ್ಲಿ ಉಂಟಾಗಿರುವ ವೈದ್ಯರ ಕೊರತೆಯನ್ನು ವಿವರಿಸಿದರು.