ಮೈಸೂರು :ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರ ಮಾವ ತಿಮ್ಮಯ್ಯ (ಪಾಪಣ್ಣ) (83) ಅನಾರೋಗ್ಯದಿಂದ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಇಂದು ಮೈಸೂರಿನ ಚಾಮುಂಡಿ ಬೆಟ್ಟದ ತಪ್ಪಲಿನ ಅವರ ತೋಟದಲ್ಲಿ ನಡೆದ ಅಂತ್ಯಕ್ರಿಯೆಯಲ್ಲಿ ಡಿ.ಕೆ ಶಿವಕುಮಾರ್ ಭಾಗಿಯಾಗಿದ್ದರು.
ಮೈಸೂರಿನ ಇಟ್ಟಿಗೆಗೂಡಿನ ನಿವಾಸಿಯಾದ ತಿಮ್ಮಯ್ಯ ಅವರನ್ನು ಅನಾರೋಗ್ಯ ಹಿನ್ನೆಲೆ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಮಂಗಳವಾರ ಮಧ್ಯಾಹ್ನ ನಿಧನರಾಗಿದ್ದರು.
ಡಿ ಕೆ ಶಿವಕುಮಾರ್ ಮಾವ ತಿಮ್ಮಯ್ಯ ಮೈಸೂರಿನ ಶ್ರೀರಾಜ ಸೋಪ್ ನಟ್ ಕಾರ್ಖಾನೆಯ ಮಾಲೀಕರಾಗಿದ್ದ ತಿಮ್ಮಯ್ಯ ಅವರು ಪತ್ನಿ ಲಕ್ಷ್ಮಿ, ಪುತ್ರ ಸತ್ಯನಾರಾಯಣ್ ಪುತ್ರಿಯರಾದ ಸುಮ ರಂಗನಾಥ್ ಹಾಗೂ ಡಿ ಕೆ ಶಿವಕುಮಾರ್ ಪತ್ನಿ ಉಷಾರನ್ನು ಅಗಲಿದ್ದಾರೆ.
ಪಾರ್ಥಿವ ಶರೀರವನ್ನು ಮಂಗಳವಾರ ರಾತ್ರಿ ಮೈಸೂರಿನ ನಿವಾಸಕ್ಕೆ ತರಲಾಗಿದೆ. ಇಂದು ಬೆಳಗ್ಗೆ 11 ಗಂಟೆಯವರೆಗೆ ಸಾರ್ವಜನಿಕರ ದರ್ಶನಕ್ಕೆ ಇರಿಸಲಾಗಿತ್ತು. 11:30ಕ್ಕೆ ಚಾಮುಂಡಿ ಬೆಟ್ಟದ ತಪ್ಪಲಿನ ಅವರ ತೋಟದಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಯಿತು.
ಸಿಂದಗಿ ಹಾಗೂ ಹಾನಗಲ್ ಉಪ ಚುನಾವಣಾ ಕ್ಷೇತ್ರದ ಪ್ರಚಾರದಲ್ಲಿದ್ದ ಡಿ ಕೆ ಶಿವಕುಮಾರ್ ಪ್ರಚಾರವನ್ನು ಮೊಟಕುಗೊಳಿಸಿ ಮಾವನ ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡರು.