ಮೈಸೂರು:ನಾಡಹಬ್ಬ ದಸರಾ ಉದ್ಘಾಟನೆಗೆ ಸರಸ್ವತಿ ಸಮ್ಮಾನ್ ಹಾಗೂ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಹಿರಿಯ ಸಾಹಿತಿ ಡಾ.ಎಸ್.ಎಲ್.ಭೈರಪ್ಪ ಅವರಿಗೆ ಜಿಲ್ಲಾಡಳಿತದಿಂದ ಅಧಿಕೃತವಾಗಿ ಗುರುವಾರ ಆಹ್ವಾನ ನೀಡಲಾಯಿತು.
ದಸರಾ ಉದ್ಘಾಟನೆಗೆ ಸಾಹಿತಿ ಭೈರಪ್ಪನವರಿಗೆ ಜಿಲ್ಲಾಡಳಿತದಿಂದ ಆಹ್ವಾನ
ಕುವೆಂಪು ನಗರದಲ್ಲಿರುವ ಭೈರಪ್ಪ ಅವರ ನಿವಾಸಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಹಾಗೂ ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ಹಾಗೂ ಅಧಿಕಾರಿ ವರ್ಗದವರು ಸೆ. 29 ಚಾಮುಂಡೇಶ್ವರಿ ಬೆಟ್ಟದಲ್ಲಿ ಜರುಗುವ ಅದ್ಧೂರಿ ದಸರಾ ಮಹೋತ್ಸವದ ಉದ್ಘಾಟನೆಗೆ ಆಹ್ವಾನ ನೀಡಿದರು.
ಅಧಿಕೃತ ಆಹ್ವಾನ ಸ್ವೀಕರಿಸಿದ ನಂತರ ಮಾತನಾಡಿದ ಡಾ.ಎಸ್.ಎಲ್. ಭೈರಪ್ಪ ಅವರು, ಉದ್ಘಾಟನೆ ಮಾಡಲಿರುವುದು ಖುಷಿಯ ವಿಚಾರ. ನಾಡಹಬ್ಬದ ಉದ್ಘಾಟನೆಗೆ ಪ್ರೀತಿಯಿಂದಾಹ್ವಾನ ನೀಡಿದ್ದು, ಈ ನಿಟ್ಟಿನಲ್ಲಿ ವಿದೇಶ ಪ್ರವಾಸವನ್ನು ಮುಂದಕ್ಕೆ ಹಾಕಿದ್ದೇನೆ. ಇವರ ಪ್ರೀತಿಗೆ ನಾನು ಕೃತಜ್ಞನಾಗಿದ್ದೇನೆ ಎಂದರು.
ಪ್ರೀತಿಗೆ ಯಾರೇ ಆದ್ರೂ ತಲೆ ಬಾಗಲೇಬೇಕು. ಸಾಹಿತಿಗಳನ್ನ ಪ್ರೀತಿಮಾಡುವ ಜನರು ಈ ಸರ್ಕಾರದಲ್ಲಿ ಇದ್ದಾರೆ ಇದು ಬಹಳ ಮುಖ್ಯ. ಇದಕ್ಕಿಂತ ಹೆಚ್ಚಾಗಿ ಹೇಳಿದ್ರೆ ನಾನು ಹೊಗಳ್ತೀನಿ ಅನ್ನಿಸಬಹುದು. ಕೇಂದ್ರ ಹಾಗೂ ರಾಜ್ಯ ಸರ್ಕಾರವಾಗಲಿ ತಪ್ಪು ಮಾಡಿದರೆ ಎಚ್ಚರಿಕೆ ನೀಡುತ್ತೇನೆ ಎಂದು ತಿಳಿಸಿದರು.