ಮೈಸೂರು: ಈ ಬಾರಿ ಚುನಾವಣೆಯಲ್ಲಿ ವ್ಯಾಪಕವಾಗಿ ಅಕ್ರಮ ನಡೆದಿದ್ದು, ಅಭ್ಯರ್ಥಿಗಳು ಮತದಾರರನ್ನು ನೋಟಿನಿಂದಲೇ ಖರೀದಿ ಮಾಡಿದ್ದಾರೆ. ಆದ್ದರಿಂದ ಈ ಬಾರಿಯ ಮತದಾನವನ್ನು ರದ್ದುಗೊಳಿಸಬೇಕು ಎಂದು ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಪ್ರತಿಭಟನೆ ಮೂಲಕ ಆಗ್ರಹಿಸಿದ್ದಾರೆ.
ಇಂದು ಮೈಸೂರಿನ ಹಾರ್ಡಿಂಜ್ ವೃತ್ತದ ಬಳಿ ಪ್ರತಿಭಟನೆ ನಡೆಸಿದ ಅವರು, ಈ ಬಾರಿಯ ಮತದಾನದ ಸಂದರ್ಭದಲ್ಲಿ ವ್ಯಾಪಕವಾಗಿ ಅಭ್ಯರ್ಥಿಗಳು ಮತದಾರರಿಗೆ ಹಣ ಹಂಚಿದ್ದಾರೆ. ಹಣದ ಮೂಲಕವೇ ಮತದಾರರನ್ನು ಖರೀದಿ ಮಾಡಿದ್ದಾರೆ ಎಂದು ಆರೋಪಿಸಿದರು. ಅಲ್ಲದೆ, ಚುನಾವಣಾ ಆಯೋಗ ಈ ಮತದಾನವನ್ನು ರದ್ದುಗೊಳಿಸಬೇಕು ಎಂದು ಆಗ್ರಹಿಸಿದರು. ಜೊತೆಗೆ ಚಾಮರಾಜನಗರದಲ್ಲಿ ಪ್ರತಿ ವೋಟಿಗೆ ಎರಡು ಸಾವಿರದಿಂದ ಹತ್ತು ಸಾವಿರದವರೆಗೆ ಹಣ ನೀಡಲಾಗಿದೆ. ಈ ಚುನಾವಣೆಯಲ್ಲಿ ರಾಜ್ಯದಲ್ಲಿ ಲಕ್ಷ ಕೋಟಿಗಳಷ್ಟು ಹಣ ಖರ್ಚಾಗಿದೆ. ಹಣ ಹಂಚಿಕೆ ಮಾಡುತ್ತಿದ್ದರೂ ಪೊಲೀಸರು ಹಾಗೂ ಚುನಾವಣಾ ಅಧಿಕಾರಿಗಳು ಯಾರನ್ನೂ ಅರೆಸ್ಟ್ ಮಾಡಿಲ್ಲ. ರಾಜ್ಯದಲ್ಲಿ ಚುನಾವಣಾ ಆಯೋಗ ಸತ್ತು ಹೋಗಿದೆ ಎಂದು ವಾಗ್ದಾಳಿ ನಡೆಸಿದರು.