ಮೈಸೂರು: ಹಿರಿಯ ಐಎಎಸ್ ಅಧಿಕಾರಿ ಹರ್ಷಗುಪ್ತ ಅವರ ಜುಬಿಲಂಟ್ ಕಾರ್ಖಾನೆ ತನಿಖಾ ವರದಿಯನ್ನ ರಾಜ್ಯ ಸರ್ಕಾರ ಬಹಿರಂಗಗೊಳಿಸಬೇಕು ಎಂದು ಮಾಜಿ ಸಂಸದ ಆರ್.ಧ್ರುವನಾರಾಯಣ್ ಒತ್ತಾಯಿಸಿದ್ದಾರೆ.
ಜುಬಿಲಂಟ್ ಕಾರ್ಖಾನೆಯ ತನಿಖಾ ವರದಿ ಬಹಿರಂಗಗೊಳಿಸುವಂತೆ ಧ್ರುವನಾರಾಯಣ ಒತ್ತಾಯ
ರಾಜ್ಯ ಸರ್ಕಾರದ ಎಲ್ಲಾ ಸಚಿವರಿಂದಲೂ ಜುಬಿಲಂಟ್ ವಿಚಾರದಲ್ಲಿ ನೀಡಿರೋ ದ್ವಂದ್ವ ಹೇಳಿಕೆ ಗೊಂದಲ ಸೃಷ್ಟಿಸಿದೆ ಎಂದು ಮಾಜಿ ಸಂಸದ ಆರ್.ಧ್ರುವನಾರಾಯಣ್ ಹೇಳಿದ್ದಾರೆ.
ಜಲದರ್ಶಿನಿ ಅತಿಥಿ ಗೃಹದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಜುಬಿಲಂಟ್ ಕಾರ್ಖಾನೆಯಿಂದ ಕೊರೊನಾ ಸೋಂಕು ಹರಡಿದ್ದು ಹೇಗೆ? ಆಡಳಿತ ಪಕ್ಷಕ್ಕೆ ಸೇರಿದ ಸ್ಥಳೀಯ ಶಾಸಕರೇ ಈ ಬಗ್ಗೆ ಧ್ವನಿ ಎತ್ತಿದ್ದಾರೆ. ಸತ್ಯಾಂಶ ಬಯಲಾಗಬೇಕು. ಮುಖ್ಯಮಂತ್ರಿಗಳು ಜುಬಿಲಂಟ್ ಬಗ್ಗೆ ಆಗ ಹೇಳುತ್ತಿದ್ದ ಮಾತುಗಳನ್ನು ಈಗ ಕೇಳುತ್ತಿಲ್ಲ. ಯಾಕೆ ಮೌನ ವಹಿಸಿದ್ದಾರೆ ಎಂಬ ಪ್ರಶ್ನೆ ಕಾಡುತ್ತಿದೆ ಎಂದರು.
ಕೇಂದ್ರದಲ್ಲಿರೋ ಬಿಜೆಪಿ ನಾಯಕರ ಮೂಲಕ ಜುಬಿಲಂಟ್ ಪ್ರಭಾವ ಬಳಸುತ್ತಿದೆ. ರಾಜ್ಯ ಸರ್ಕಾರದ ಎಲ್ಲಾ ಸಚಿವರಿಂದಲೂ ಜುಬಿಲಂಟ್ ವಿಚಾರದಲ್ಲಿ ನೀಡಿರೋ ದ್ವಂದ್ವ ಹೇಳಿಕೆ ಗೊಂದಲ ಸೃಷ್ಟಿಸಿದೆ ಎಂದರು. ಕೇಂದ್ರ ಸರ್ಕಾರ ಕೂಲಿ ಕಾರ್ಮಿಕರ ಬೆವರು ಹಾಗೂ ರಕ್ತದ ಜೊತೆ ಚೆಲ್ಲಾಟವಾಡುತ್ತಿದೆ. ಹೊರದೇಶದಲ್ಲಿ ಇರುವವರನ್ನು ವಿಮಾನದ ಮೂಲಕ ದೇಶಕ್ಕೆ ಕರೆಸಿಕೊಳ್ಳಲು ಇರುವ ಉತ್ಸಾಹ. ಕೂಲಿ ಕಾರ್ಮಿಕರ ಮೇಲೆ ಯಾಕಿಲ್ಲ? ಬಡವರಿಗೊಂದು ನ್ಯಾಯ, ಶ್ರೀಮಂತರಿಗೊಂದು ನ್ಯಾಯವೇ ಎಂದು ಅಸಮಾಧಾನ ವ್ಯಕ್ತಪಡಿಸಿದರು.