ಮೈಸೂರು:ಲಾಕ್‌ಡೌನ್ ಸಂದರ್ಭದಲ್ಲಿ ನಂಜನಗೂಡು ದೇವಾಲಯಕ್ಕೆ ವಿಜಯೇಂದ್ರ ಭೇಟಿ ನೀಡಿದ ವಿಚಾರಕ್ಕೆ ಕಾಂಗ್ರೆಸ್ ಜಿಲ್ಲಾಧಿಕಾರಿಗಳಿಗೆ ದೂರು ನೀಡಿದ್ದರೂ ಕ್ರಮ ಕೈಗೊಂಡಿಲ್ಲ ಯಾಕೆ? ಎಂದು ಕೆಪಿಸಿಸಿ ಕಾರ್ಯಧ್ಯಕ್ಷ ಧ್ರುವ ನಾರಾಯಣ್ ಜಿಲ್ಲಾಧಿಕಾರಿಗೆ ಪ್ರಶ್ನಿಸಿದ್ದಾರೆ.
ಇಂದು ನಗರದ ಕಾಂಗ್ರೆಸ್ ಭವನದಲ್ಲಿ ಮಾಧ್ಯಮಗೋಷ್ಟಿ ಉದ್ದೇಶಿಸಿ ಮಾತನಾಡಿದ ಅವರು, ಮುಖ್ಯಮಂತ್ರಿಯವರ ಮಗ ವಿಜಯೇಂದ್ರ ಲಾಕ್‌ಡೌನ್ ಸಂದರ್ಭದಲ್ಲಿ, ಕೋವಿಡ್ ನಿಮಯ ಪಾಲಿಸಿಲ್ಲ ಎಂದು ಮೈಸೂರು ಜಿಲ್ಲಾಧಿಕಾರಿಗೆ ಕಾಂಗ್ರೆಸ್ ದೂರು ನೀಡಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಹಾಗಾದರೆ ಜನರಿಗೆ ಒಂದು ಕಾನೂನು ಬೇರೆಯವರಿಗೆ ಒಂದು ಕಾನೂನೇ? ಇದು ಸರಿಯಲ್ಲ. ಹೀಗಾಗಿ ವಿಜಯೇಂದ್ರ ವಿಚಾರದಲ್ಲಿ ಯಾವ ರೀತಿ ಕ್ರಮ ಕೈಗೊಂಡಿದ್ದೀರಿ ಎಂದು ಜಿಲ್ಲಾಧಿಕಾರಿಗಳು ಸ್ಪಷ್ಟಪಡಿಸಬೇಕು ಎಂದು ಆಗ್ರಹಿಸಿದರು.
ವಿಜಯೇಂದ್ರ ವಿರುದ್ಧ ಕ್ರಮ ಏಕಿಲ್ಲ ?.. ಧ್ರುವ ನಾರಾಯಣ ಪ್ರಶ್ನೆ ಮೈಸೂರು ಜಿಲ್ಲೆಯಲ್ಲಿ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ನಡುವೆ ನಡೆಯುತ್ತಿರುವ ಜಗಳದಿಂದ ಮೈಸೂರಿನ ಮರ್ಯಾದೆ ಹೋಗುತ್ತಿದೆ. ಈ ಜಿಲ್ಲೆಗೆ ತನ್ನದೇ ಆದ ಹೆಗ್ಗಳಿಕೆ ಇದೆ, ಇಂತಹ ಕೊರೊನಾ ಸಂದರ್ಭದಲ್ಲಿ ಈ ರೀತಿಯ ಆರೋಪ- ಪ್ರತ್ಯಾರೋಪಗಳು ಸರಿಯಲ್ಲ ಎಂದ್ರು.
ಬೆಂಗಳೂರನ್ನು ಹೊರತುಪಡಿಸಿದರೆ ಮೈಸೂರು ಜಿಲ್ಲೆಯಲ್ಲಿ ಅತಿ ಹೆಚ್ಚು ಕೋವಿಡ್ ಪಾಸಿಟಿವ್ ಪ್ರಕರಣಗಳು ದಾಖಲಾಗುತ್ತಿದ್ದು, ಇಂತಹ ಸಂದರ್ಭದಲ್ಲಿ ಒಗ್ಗಟ್ಟಿನಿಂದ ಕೆಲಸ ಮಾಡಬೇಕು ಎಂದು ಧೃವ ನಾರಾಯಣ್ ಸಲಹೆ ನೀಡಿದರು. ಇವರ ಕಿತ್ತಾಟ ನೋಡಿದರೆ ಭ್ರಷ್ಟಾಚಾರದ ವಾಸನೆ ಬರುತ್ತಿದೆ. ಆದ್ದರಿಂದ ಜಿಲ್ಲಾಡಳಿತ ಕೋವಿಡ್ ನಿಯಂತ್ರಣ ವೆಚ್ಚ ಹಾಗೂ ಟೆಂಡರ್ದಾರರು ಯಾರು ಎಂಬ ಹೆಸರನ್ನು ಬಹಿರಂಗಪಡಿಸಬೇಕು. ಸ್ಟೆಪ್ ಡೌನ್ ಆಸ್ಪತ್ರೆಯನ್ನು ರದ್ದು ಮಾಡಿದ ಬಗ್ಗೆ ವರದಿ ನೀಡಿ, ಈ ಬಗ್ಗೆ ಸಮಗ್ರ ತನಿಖೆ ಮಾಡಬೇಕೆಂದು ಆಗ್ರಹಿಸಿದರು.
ಜಿಲ್ಲಾ ಆರೋಗ್ಯ ಕುಟುಂಬ ಕಲ್ಯಾಣಾಧಿಕಾರಿ(DHO) ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವರು ಸಭೆಯಲ್ಲಿ ಜಾತಿನಿಂದನೆ ಮಾಡಿದ್ದು ಸರಿಯಲ್ಲ. ಇದನ್ನು ಕಾಂಗ್ರೆಸ್ ಖಂಡಿಸುತ್ತದೆ ಎಂದರು. ಜೊತೆಗೆ ನಿನ್ನೆ ಸುದ್ದಿಗೋಷ್ಟಿಯಲ್ಲಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ ಟಿ ರವಿ ಕಾಂಗ್ರೆಸ್ ಪಕ್ಷವನ್ನು ಟೀಕಿಸಿದ್ದು ಸರಿಯಲ್ಲ ಎಂದು ಧ್ರುವ ನಾರಾಯಣ ಹೇಳಿದರು.