ಮೈಸೂರು:ನಮ್ಮ ಸಮುದಾಯದಲ್ಲೊಬ್ಬರು ಮುಖ್ಯಮಂತ್ರಿಯಾಗಬೇಕು ಎಂಬ ಆಸೆ ನನಗೂ ಇದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್. ಧ್ರುವನಾರಾಯಣ್ ಹೇಳಿದರು.
ಮೈಸೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಪಕ್ಷ ಅಧಿಕಾರಕ್ಕೆ ಬಂದಾಗ ಹೈಕಮಾಂಡ್ ಅದನ್ನು ತೀರ್ಮಾನ ಮಾಡುತ್ತದೆ. ಎಲ್ಲ ಸಮುದಾಯದವರಿಗೂ ಅವರವರ ಮುಖಂಡರು ಮುಖ್ಯಮಂತ್ರಿ ಮಾಡಬೇಕು ಎಂಬ ಆಸೆ ಇದ್ದೇ ಇರುತ್ತದೆ. ಚುನಾವಣೆಯ ಮೂಲಕ ಅಧಿಕಾರಕ್ಕೆ ಬಂದಾಗ, ಪಕ್ಷದ ಹೈಕಮಾಂಡ್ ತೆಗೆದುಕೊಳ್ಳುವ ತೀರ್ಮಾನಕ್ಕೆ ಎಲ್ಲರೂ ಬದ್ದರಾಗಿರುತ್ತಾರೆ ಎಂದರು.
ಪ್ರತಿಯೊಂದು ಸಮಾಜದಲ್ಲಿ ಆಸೆ ಇದ್ದೇ ಇರುತ್ತೆ. ಅದನ್ನು ತಪ್ಪು ಅಂತ ಹೇಳಲು ಸಾಧ್ಯವಿಲ್ಲ. ಒಟ್ಟಾರೆ ವರಿಷ್ಠರ ತೀರ್ಮಾನ ಅಂತಿಮ. ಆಗ ಇಂತಹ ಪ್ರಶ್ನೆಗಳು ಅಪ್ರಸ್ತುತ. ಬಿಜೆಪಿ ಸರ್ಕಾರದ ಆಡಳಿತ ವೈಫಲ್ಯ ತೋರಿಸಬೇಕು. ಜನರಿಗೆ ಇದೆಲ್ಲ ತಿಳಿಸಬೇಕು. ಕಾಂಗ್ರೆಸ್ ಪಕ್ಷ ಹೋರಾಟ ಮಾಡುತ್ತಿರುವುದರಿಂದ ಬಿಜೆಪಿಗೆ ಹೊಡೆತ ಬೀಳುತ್ತಿದೆ ಎಂದು ತಿಳಿಸಿದರು.
ದಲಿತ ಸಮಾಜಕ್ಕೆ ಒಳ್ಳೆಯ ಕೆಲಸ : ರಾಜಕೀಯ ಪಕ್ಷಗಳಲ್ಲಿ ಅವರವರ ಸಮಾಜ ಒಂದುಗೂಡಿಸುವುದು ತಪ್ಪಲ್ಲ. ಜಾತಿ ಆಧಾರದ ಮೇಲೆ ಚುನಾವಣೆಗಳು ನಡೆಯುತ್ತದೆ. ಆದ್ದರಿಂದ, ಆಯಾಯ ಸಮುದಾಯವರು ನಮ್ಮ ಪಕ್ಷದಲ್ಲಿ ಸಮಾಜ ಒಗ್ಗೂಡಿಸುವುದು ನಮ್ಮ ಕರ್ತವ್ಯವಾಗಿದೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗಿನಿಂದಲೂ ದಲಿತ ಸಮಾಜಕ್ಕೆ ಒಳ್ಳೆಯ ಕೆಲಸ ಮಾಡಿಕೊಂಡೇ ಬಂದಿದೆ ಎಂದರು.