ಮೈಸೂರು: ಚೀನಾದಲ್ಲಿ ನ್ಯುಮೋನಿಯಾ ಉಲ್ಬಣದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ದೇಶಾದ್ಯಂತ ಆರೋಗ್ಯಾಧಿಕಾರಿಗಳಿಗೆ ಹೈ ಅಲರ್ಟ್ ಘೋಷಿಸಿದೆ. ಇನ್ನು ರಾಜ್ಯದ ಆರೋಗ್ಯ ಅಧಿಕಾರಿಗಳ ಮಾರ್ಗದರ್ಶನದಂತೆ, ಮೈಸೂರಿನಲ್ಲಿ ಎಲ್ಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಸದ್ಯಕ್ಕೆ ಯಾವುದೇ ನ್ಯುಮೋನಿಯಾ ಪ್ರಕರಣಗಳು ಮೈಸೂರಿನಲ್ಲಿ ಕಂಡು ಬಂದಿಲ್ಲ. ಆದರೂ ಮುನ್ನೆಚ್ಚರಿಕೆ ಕ್ರಮವಾಗಿ ಎಲ್ಲ ಪೂರ್ವ ಸಿದ್ಧತೆ ಮಾಡಿಕೊಳ್ಳಲಾಗಿದ್ದು, ಯಾವುದೇ ಆತಂಕ ಮೈಸೂರಿನಲ್ಲಿ ಇಲ್ಲ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ ಕುಮಾರಸ್ವಾಮಿ ತಿಳಿಸಿದರು.
ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿ ಅವರು, ಚೀನಾದಲ್ಲಿ ನ್ಯುಮೋನಿಯಾ, ಅಂದರೆ ಶ್ವಾಸಕೋಶ ಮತ್ತು ಜ್ವರಕ್ಕೆ ಸಂಬಂಧಿಸಿದ ಆರೋಗ್ಯ ಸಮಸ್ಯೆ ಬಗ್ಗೆ ಗ್ಲೋಬಲ್ ವಾರ್ನಿಂಗ್ ಬರ್ತಿದೆ. ರಾಷ್ಟ್ರ ಮಟ್ಟದಲ್ಲೂ ಇದರ ಬಗ್ಗೆ ಎಚ್ಚರಿಕೆ ನೀಡಲಾಗಿದ್ದು, ರಾಜ್ಯದಲ್ಲೂ ಈ ಬಗ್ಗೆ ಸುತ್ತೋಲೆಗಳನ್ನ ಹೊರಡಿಸಲಾಗಿದೆ. ಈಗಾಗಲೇ ಈ ಫೀವರ್ ಡಿಸೀಸ್ ಕಂಟ್ರೋಲ್ ಮಾಡುವ ಪ್ರೋಟೋಕಾಲ್ ಸಿದ್ಧ ಮಾಡಲಾಗಿದೆ. ನಾವು ಈಗಾಗಲೇ ಈ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗಿದ್ದು, ಜಿಲ್ಲೆಯ ಸಾರ್ವಜನಿಕ ಆಸ್ಪತ್ರೆಯ ವೈದ್ಯಾಧಿಕಾರಿಗಳಿಗೆ, ಆಡಳಿತ ವೈದ್ಯಾಧಿಕಾರಿಗಳಿಗೆ, ಫೀಲ್ಡ್ ಸಿಬ್ಬಂದಿಗಳಿಗೆ ಇದರ ಬಗ್ಗೆ ಈಗಾಗಲೇ ಜಾಗೃತಿ ಮೂಡಿಸಲಾಗುತ್ತಿದೆ ಎಂದರು.
ಹಿಂದೆ ಕೋವಿಡ್ ಸಂದರ್ಭದಲ್ಲಿ ಯಾವ ರೀತಿ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗಿತ್ತೋ ಆ ನಿಟ್ಟಿನಲ್ಲಿ ಕೆಲಸ ಮಾಡಲಾಗುತ್ತಿದೆ. ರಾಜ್ಯ ಮಟ್ಟದ ಆಯುಕ್ತರ ನಿರ್ದೇಶನದಂತೆ ಎಲ್ಲ ಆಸ್ಪತ್ರೆಗಳಿಗೂ ಫೀವರ್, ಉಸಿರಾಟದ ತೊಂದರೆ, ಆಕ್ಸಿಜನ್ ಜೊತೆ ಯಾವ ರೀತಿ ಚಿಕಿತ್ಸೆ ನೀಡಬೇಕು ಎಂಬುದನ್ನು ತಿಳಿಸಲಾಗಿದೆ. ಇಲ್ಲಿಯವರೆಗೆ ಮೈಸೂರಿನಲ್ಲಿ ಯಾವುದೇ ಪ್ರಕರಣಗಳು ಕಂಡು ಬಂದಿಲ್ಲ. ಮುಂದೆ ಏನಾದರೂ ಪ್ರಕರಣಗಳು ಹೆಚ್ಚಾದರೆ ಎದುರಿಸಲು ಸಿದ್ಧವಾಗಿದ್ದೇವೆ ಎಂದು ತಿಳಿಸಿದರು.