ಮೈಸೂರು:ಮೈಸೂರಿನಲ್ಲಿ ಪರಸ್ಪರ ಬೀದಿ ಜಗಳಕ್ಕೆ ಇಳಿದಿದ್ದ ಐಎಎಸ್ ಅಧಿಕಾರಿಗಳ ಎತ್ತಂಗಡಿ ನಂತರ ಈಗ ಮತ್ತೊಬ್ಬ ಹಿರಿಯ ಅಧಿಕಾರಿಗೆ ವರ್ಗಾವಣೆ ಮಾಡಲಾಗಿದೆ. ಜಿಲ್ಲೆಯಲ್ಲಿ ಕೋವಿಡ್ ವಿಕೋಪ ಸ್ಥಿತಿಯನ್ನು ಸರಿಯಾಗಿ ನಿರ್ವಹಣೆ ಮಾಡಲಿಲ್ಲ ಎನ್ನುವ ಕಾರಣಕ್ಕೆ ಕಾರ್ಯನಿರ್ವಹಿಸುತ್ತಿದ್ದ ಜಿಲ್ಲಾ ಆರೋಗ್ಯ ಅಧಿಕಾರಿ ಡಾ.ಟಿ. ಅಮರ್ನಾಥ್ರನ್ನು ಸರಕಾರ ವರ್ಗಾವಣೆ ಮಾಡಿದೆ.
ಡಾ ಅಮರ್ ನಾಥ್ರ ಜಾಗಕ್ಕೆ ಆರೋಗ್ಯ ಇಲಾಖೆ ವಿಭಾಗಿಯ ಉಪನಿರ್ದೇಶಕ ಡಾ. ಕೆ.ಎಚ್. ಪ್ರಸಾದ್ರನ್ನು ನೇಮಕ ಮಾಡಿ ಸರ್ಕಾರ ಆದೇಶ ಹೊರಡಿಸಿದೆ. ಮೈಸೂರಿನಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚಾಗಿದ್ದು, ಸಾವು ಅಧಿಕಗೊಳ್ಳಲು ಸೂಕ್ತ ನಿರ್ವಹಣೆ ಕೊರತೆ ಕಾರಣ ಎನ್ನಲಾಗಿತ್ತು.
ಕೋವಿಡ್ ಪರಿಸ್ಥಿತಿ ನಿರ್ವಹಣೆ ವಿಚಾರವಾಗಿ ಆರೋಗ್ಯಾಧಿಕಾರಿ ಅಮರ್ ನಾಥ್ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಹಾಗೂ ಪಾಲಿಕೆ ಆಯುಕ್ತರಾಗಿದ್ದ ಶಿಲ್ಪಾನಾಗ್ಗೆ ಕಾಲಕಾಲಕ್ಕೆ ಮಾಹಿತಿ ಕೊಟ್ಟು ಸಮನ್ವಯ ಮಾಡುವುದರಲ್ಲೂ ಅಮರ್ ನಾಥ್ ವಿಫಲರಾಗಿದ್ದರು ಎನ್ನುವ ಮಾಹಿತಿ ಸರಕಾರಕ್ಕೆ ಹೋಗಿತ್ತು.
ಸದ್ಯ ನೇಮಕಗೊಂಡಿರುವ ಡಾ. ಪ್ರಸಾದ್ ಅವರು ಈ ಹಿಂದೆ ಚಾಮರಾಜನಗರ ಜಿಲ್ಲೆಯಲ್ಲಿ ನಡೆದಿದ್ದ ಸುಳ್ವಾಡಿ ಪ್ರಸಾದ ತಿಂದು ಬಲಿಯಾದ ದುರಂತದಲ್ಲಿ ಸಕಾಲಿಕವಾಗಿ ಕಾರ್ಯನಿರ್ವಹಿಸಿದ್ದರು ಆ ಮೂಲಕ ನೂರಾರು ಜನರನ್ನು ಬದುಕುಳಿಯುವಂತೆ ಮಾಡಿದ್ದರು ಎಂದು ಮಾಹಿತಿ ಪಡೆದಿತ್ತು. ಹೀಗಾಗಿ ಕೋವಿಡ್ ನಂತ ವಿಕೋಪ ಸ್ಥಿತಿ ನಿರ್ವಹಣೆಗಾಗಿ ಪ್ರಸಾದ್ ಅವರನ್ನು ನೇಮಕ ಮಾಡಲಾಗಿದೆ ಎನ್ನಲಾಗಿದೆ.