ಮೈಸೂರು :ನಂಜನಗೂಡು ನಂಜುಂಡೇಶ್ವರನ ಪಂಚ ಮಹಾರಥೋತ್ಸವಕ್ಕೆ ಅವಕಾಶ ನೀಡುವಂತೆ ಭಕ್ತಾದಿಗಳು, ಜಿಲ್ಲಾ ಉಸ್ತುವಾರಿ ಸಚಿವ ಎಸ್ ಟಿ ಸೋಮಶೇಖರ್ ಅವರಿಗೆ ಮನವಿ ಮಾಡಿದ್ದಾರೆ. ಜಿಪಂ ಸಭಾಂಗಣದ ಬಳಿ ಆಗಮಿಸಿದ ಭಕ್ತಾದಿಗಳು, ಕಳೆದ ವರ್ಷವೂ ಜಾತ್ರೆ ನಡೆದಿಲ್ಲ. ಈ ಬಾರಿ ಜಾತ್ರೆ ನಡೆಸಲು ಅವಕಾಶ ನೀಡುವಂತೆ ಮನವಿ ಸಲ್ಲಿಸಿದರು.
ಈಗಾಗಲೇ ಈ ಬಾರಿ ಜಾತ್ರೆಗಾಗಿ ಎಲ್ಲ ರೀತಿಯ ಸಿದ್ಧತೆ ನಡೆಸಲಾಗಿದೆ. ರಥೋತ್ಸವ ರದ್ದು ಆದೇಶ ನೋವುಂಟು ಮಾಡಿದೆ. ಧಾರ್ಮಿಕ ಕಾರ್ಯಗಳು ನಡೆಯದಿದ್ದಲ್ಲಿ ತಾಲೂಕಿಗೆ ಕೆಡುಕಾಗುವ ಆತಂಕವಿದೆ. ಇಡೀ ದೇಶಕ್ಕೆ ಕೆಡುಕಾಗಲಿದೆ ಎಂದು ಮನವಿ ಮಾಡಿದರು.
ಕೋವಿಡ್ ನಿಯಮ ಪಾಲಿಸಿ ನಂಜುಂಡೇಶ್ವರನ ಜಾತ್ರೆ ಆಚರಿಸಲು ಅನುಮತಿ ನೀಡಿ, ಕೊರೊನಾ ಬಗ್ಗೆ ನಮಗೂ ಅರಿವಿದೆ. ಕೊರೊನಾ ಮುನ್ನೆಚ್ಚರಿಕಾ ಕ್ರಮವಹಿಸಿ ಜಾತ್ರೆ ನಡೆಸುತ್ತೇವೆ ಎಂದು ಮನವಿ ಮಾಡಿದ್ದಾರೆ.
ಮನವಿ ಸ್ವೀಕರಿಸಿದ ನಂತರ ಸಚಿವ ಎಸ್ ಟಿ ಸೋಮಶೇಖರ್ ಮಾತನಾಡಿ, ಆರೋಗ್ಯ ಸಚಿವರೊಟ್ಟಿಗೆ ಮಾತನಾಡುತ್ತೇನೆ ಎಂದು ಭರವಸೆ ನೀಡಿದರು. ಬಳಿಕ ಕೊರೊನಾ ಕುರಿತು ಪ್ರತಿಕ್ರಿಯಿಸಿದ ಅವರು, ಜಿಲ್ಲೆಯಲ್ಲಿ ಈಗ 269 ಸಕ್ರಿಯ ಕೋವಿಡ್ ಪ್ರಕರಣಗಳಿವೆ. ಈ ಸಂಖ್ಯೆ ಜಾಸ್ತಿಯಾಗದಂತೆ ಎಲ್ಲರೂ ಎಚ್ಚರ ವಹಿಸೋಣ ಎಂದರು.
ಜಿಲ್ಲಾಧಿಕಾರಿಗಳ ನೇತೃತ್ವದ ಅಧಿಕಾರಿಗಳ ತಂಡ ಕೋವಿಡ್ ನಿಯಂತ್ರಣಕ್ಕೆ ಸೂಕ್ತ ಕ್ರಮಕೈಗೊಂಡಿದೆ. ಪೊಲೀಸ್ ಆಯುಕ್ತರು, ಪೊಲೀಸ್ ಅಧೀಕ್ಷರು, ಮಹಾನಗರ ಪಾಲಿಕೆ ಆಯುಕ್ತರು, ಜಿಲ್ಲಾ ಪಂಚಾಯತ್ ಸಿಇಒ ಮುಂತಾದ ಅಧಿಕಾರಿಗಳು ಇನ್ನೂ ಸ್ವಲ್ಪ ದಿನ ಕಟ್ಟುನಿಟ್ಟಾದ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು.