ಮೈಸೂರು: ಇನ್ನು ಮುಂದೆ ಆಸ್ಪತ್ರೆಗಳಲ್ಲಿ ನರ್ಸ್ಗಳ ಕೊರತೆಯೇ, ಇದಕ್ಕೆ ಚಿಂತೆ ಮಾಡಬೇಕಿಲ್ಲ. ಅದಕ್ಕಾಗಿಯೇ ಇಂಜಿನಿಯರಿಂಗ್ ವಿದ್ಯಾರ್ಥಿಗಳು ನರ್ಸ್ ಕೆಲಸ ಮಾಡುವ ಸ್ಟಾಫ್ ನರ್ಸ್ ರೋಬೋಟ್ ಅನ್ನು ಅಭಿವೃದ್ಧಿಪಡಿಸುತ್ತಿದ್ದಾರೆ. ಈ ರೋಬೋಟ್ ಶೀಘ್ರವೇ ಆಸ್ಪತ್ರೆಗಳಿಗೆ ಬರಲಿದೆ. ಈ ಸ್ಟಾಫ್ ನರ್ಸ್ ರೋಬೋಟ್ ಹೇಗೆ ಕೆಲಸ ಮಾಡುತ್ತದೆ, ಇದರ ಉಪಯೋಗ ಏನು, ಯಾವ ರೀತಿ ತಯಾರಿಸಲಾಗಿದೆ ಎಂಬ ಬಗ್ಗೆ ಈ ರೋಬೋಟ್ ಅನ್ನು ಅಭಿವೃದ್ಧಿಪಡಿಸಿರುವ ಇಂಜಿನಿಯರಿಂಗ್ ವಿದ್ಯಾರ್ಥಿ ಪ್ರಮೋದ್ ಈಟಿವಿ ಭಾರತ್ ಜೊತೆ ಮಾತನಾಡಿದ್ದಾರೆ. ಅವರ ಸಂದರ್ಶನದ ಭಾಗ ಇಲ್ಲಿದೆ.
ಕೋವಿಡ್ ಸಂದರ್ಭದಲ್ಲಿ ರೋಗಿಗಳನ್ನು ಉಪಚರಿಸಲು ನರ್ಸ್ಗಳ ಕೊರತೆ ಉಂಟಾಗಿತ್ತು. ಇದರಿಂದ ಇಂಜಿನಿಯರಿಂಗ್ ವಿದ್ಯಾರ್ಥಿ ಪ್ರಮೋದ್ ಹಾಗೂ ಮೈಸೂರು ಮೆಡಿಕಲ್ ಕಾಲೇಜಿನ ವೈದ್ಯರ ತಂಡವು ಸ್ಟಾಫ್ ನರ್ಸ್ ರೋಬೋಟ್ ಅನ್ನು ಅಭಿವೃದ್ಧಿಪಡಿಸಲು ನಿರ್ಧರಿಸಿದ್ದು, ನಂತರ ಸಂಶೋಧನೆ ನಡೆಸಿ ಯಶಸ್ವಿಯಾಗಿದೆ. ಈ ರೋಬೋಟ್ಗೆ ನರ್ಸ್ ಕೆಲಸ ಮಾಡಲು ಸಾಫ್ಟ್‌ವೇರ್ ಇನ್ಸ್ಟಾಲೇಷನ್ ಮಾಡಲಾಗುತ್ತದೆ. ಆ ಮೂಲಕ ಒಂದು ವಾರ್ಡ್ನ 30 ಜನ ರೋಗಿಗಳ ಚಿಕಿತ್ಸೆಗೆ ಈ ರೋಬೋಟ್ ಕೆಲಸ ಮಾಡುತ್ತದೆ. ಇದು ರೋಗಿಗಳನ್ನು ಮುಟ್ಟದೆಯೇ ಅವರ ಬಿಪಿ ಸೇರಿದಂತೆ ಪಲ್ಸ್ ರೇಟ್ ಎಲ್ಲವನ್ನೂ ಚೆಕ್ ಮಾಡಲಿದೆ.
ರೋಗಿಗಳಿಗೆ ಬೇಕಾದ ನೀರು ಮತ್ತು ದಿನನಿತ್ಯದ ವಸ್ತುಗಳನ್ನು ವಾರ್ಡ್ಗಳಿಗೆ ವಿತರಿಸಲು ರೋಬೋಟ್ ಅನ್ನು ಬಳಸಿಕೊಳ್ಳಬಹುದಾಗಿದೆ. 5-6 ಜನ ಸ್ಟಾಫ್ ನರ್ಸ್ ಮಾಡುವ ಕೆಲಸವನ್ನು ಈ ರೋಬೋಟ್ ಒಂದೇ ಮಾಡುತ್ತದೆ. ನರ್ಸ್ಗಳ ಕೊರತೆ ನೀಗಿಸಲು ರೋಬೋಟ್ ನರ್ಸ್ ಅನ್ನು ಅಭಿವೃದ್ಧಿಪಡಿಸಲಾಗಿದೆ. ಸದ್ಯ ಪ್ರಾಯೋಗಿಕವಾಗಿ ಬಳಸಲಾಗುತ್ತಿದ್ದು, ಇನ್ನೂ ಅಪ್ಗ್ರೇಡ್ ಮಾಡಿ ಆಸ್ಪತ್ರೆಗೆ ಅಳವಡಿಸಲು ಚಿಂತನೆ ನಡೆಸಲಾಗುತ್ತಿದೆ. ಇನ್ನು ಒಂದು ತಿಂಗಳ ಒಳಗೆ ಈ ರೋಬೋಟ್ ಸಂಪೂರ್ಣವಾಗಿ ತಯಾರಾಗಲಿದೆ ಎನ್ನುತ್ತಾರೆ ಇಂಜಿನಿಯರಿಂಗ್ ವಿದ್ಯಾರ್ಥಿ ಪ್ರಮೋದ್.