ಮೈಸೂರು:ಗೌರಿ-ಗಣೇಶ ಹಬ್ಬದ ಹಿನ್ನೆಲೆಯಲ್ಲಿ ದೇವರಾಜ ಮಾರುಕಟ್ಟೆಯಲ್ಲಿ ಜನಸಂದಣಿ ಹೆಚ್ಚಾಗುವುದರಿಂದ ಮುಂಜಾಗ್ರತಾ ಕ್ರಮವಾಗಿ ಮಾರುಕಟ್ಟೆಯ ಚಿಲ್ಲರೆ ಮಳಿಗೆಗಳನ್ನು ನಾಲ್ಕು ದಿನ ಬಂದ್ ಮಾಡಲು ಆದೇಶಿಸಲಾಗಿದೆ.
ಕೊರೊನಾ ಎಫೆಕ್ಟ್: ದೇವರಾಜ ಮಾರುಕಟ್ಟೆಯ ಹೂವಿನ ವ್ಯಾಪಾರ ಕೇಂದ್ರ 4 ದಿನ ಬಂದ್ - Mysore latest news
ಜನಸಂದಣಿ ಹೆಚ್ಚಾಗುವ ಹಿನ್ನೆಲೆಯಲ್ಲಿ ದೇವರಾಜ ಮಾರುಕಟ್ಟೆಯ ಚಿಲ್ಲರೆ ವ್ಯಾಪಾರದ ಮಳಿಗೆಗಳನ್ನು ನಾಲ್ಕು ದಿನಗಳ ಕಾಲ ಬಂದ್ ಮಾಡಲಾಗುತ್ತಿದ್ದು, ಅಲ್ಲಿನ ಹೂವಿನ ವ್ಯಾಪಾರಿಗಳಿಗೆ ಬೇರೆ ಕಡೆ ವ್ಯಾಪಾರಕ್ಕೆ ಅನುವು ಮಾಡಿಕೊಡಲು ಪಾಲಿಕೆ ನಿರ್ಧರಿಸಿದೆ.
ಹಬ್ಬಕ್ಕೆ ಕೆಲವೇ ದಿನಗಳು ಬಾಕಿಯಿದ್ದು, ಈ ವೇಳೆ ಗ್ರಾಹಕರು ಮಾರುಕಟ್ಟೆಗೆ ಆಗಮಿಸುವುದರಿಂದ ಜನಸಂದಣಿ ಹೆಚ್ಚಾಗುತ್ತದೆ. ಇದರಿಂದ ಕೊರೊನಾ ಹರಡುವ ಸಾಧ್ಯತೆ ಹೆಚ್ಚಿದ್ದು, ಮುಂಜಾಗ್ರತಾ ಕ್ರಮವಾಗಿ ಹೂವಿನ ವ್ಯಾಪಾರದ ಸಗಟು ಮತ್ತು ಚಿಲ್ಲರೆ ಮಾರಾಟ ಮಳಿಗೆಗಳನ್ನು ಆ. 19ರಿಂದ 22ರವರೆಗೆ ಮುಚ್ಚಲು ಆದೇಶಿಸಲಾಗಿದೆ.
ದೇವರಾಜ ಮಾರುಕಟ್ಟೆಯ ಹೂವಿನ ವ್ಯಾಪಾರಸ್ಥರು ಹಾಗೂ ಸಾರ್ವಜನಿಕರ ಅನುಕೂಲಕ್ಕಾಗಿ ಮಾರುಕಟ್ಟೆಯ ಹೂವಿನ ವ್ಯಾಪಾರ ಕೇಂದ್ರವನ್ನು ನಾಲ್ಕು ದಿನಗಳ ಕಾಲ ರೈಲ್ವೆ ನಿಲ್ದಾಣದ ಬಳಿ ಇರುವ ಜೀವರಾಯನಕಟ್ಟೆ ಮೈದಾನದಲ್ಲಿ (ಜೆ.ಕೆ.ಗ್ರೌಂಡ್) ನಡೆಸಲು ಅವಕಾಶ ಕಲ್ಪಿಸಲಾಗಿದೆ ಎಂದು ನಗರ ಪಾಲಿಕೆ ಆಯುಕ್ತ ಗುರುದತ್ತ ಹೆಗಡೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.