ಮೈಸೂರು: ಹಲಾಲ್ ವಿವಾದ ಹಿನ್ನೆಲೆಯಲ್ಲಿ ಮೈಸೂರಿನಲ್ಲಿ ಪ್ರಗತಿಪರರು, ಮುಸ್ಲಿಂ ಧರ್ಮಿಯರ ಮಾಂಸದಂಗಡಿಯಲ್ಲಿ ಮಾಂಸ ಖರೀದಿಸಿ ಸಾಮರಸ್ಯ ಸಂದೇಶ ಸಾರಿದರು. ಶಾಂತಿನಗರದ ಪ್ರಮುಖ ರಸ್ತೆಯಲ್ಲಿರುವ ಮಾಂಸದ ಅಂಗಡಿಗೆ ತೆರಳಿದ ಪದ್ಮಶ್ರೀ ಪುರಸ್ಕೃತರಾದ ಹಿರಿಯ ಸಾಹಿತಿ ದೇವನೂರ ಮಹಾದೇವ, ಪ್ರಗತಿಪರ ಚಿಂತಕರಾದ ಪಿ. ಮಲ್ಲೇಶ್, ಬಡಗಲಪುರ ನಾಗೇಂದ್ರ ಸೇರಿದಂತೆ ಇತರರು ಹಲಾಲ್ ಕಟ್ ಮಾಡಿದ್ದ ಕುರಿ ಮಾಂಸವನ್ನೇ ಖರೀದಿಸಿದರು.
ಸಮಾಜದಲ್ಲಿ ಹಿಂದೂ-ಮುಸ್ಲಿಂ ಯಾವುದೇ ಧರ್ಮದ ಬೇಧ- ಭಾವ ಮಾಡದೇ ನಾವೆಲ್ಲ ಒಂದು ಎಂದು ಬದುಕಬೇಕು. ಆದರೆ, ಕೆಲವು ಪಟ್ಟಭದ್ರ ಹಿತಾಶಕ್ತಿಗಳು, ಸಮಾಜದ ಸ್ವಾಸ್ಥ್ಯವನ್ನು ಹಾಳು ಮಾಡುತ್ತಿವೆ ಎಂದು ಕಿಡಿಕಾರಿದರು. ಈ ಸಂದರ್ಭದಲ್ಲಿ ಪದ್ಮಶ್ರೀ ಪುರಸ್ಕೃತರಾದ ದೇವನೂರ ಮಹಾದೇವ ಅವರು ಮಾಧ್ಯಮಗಳೊಂದಿಗೆ ಮಾತನಾಡಿ, ಧರ್ಮದ ಹೆಸರಿನಲ್ಲಿ ಅಧರ್ಮ ಕುಣಿದು ಕುಪ್ಪಳಿಸುತ್ತಿದೆ. ಎಲ್ಲ ಧರ್ಮದಲ್ಲೂ ಸಾಮರಸ್ಯ ಇದೆ. ಆದರೆ, ಬಿಜೆಪಿಯವರು ಸಾಮರಸ್ಯವನ್ನು ಕದಡುತ್ತಿದ್ದಾರೆ. ಧರ್ಮ ಒಡೆಯುವ ಕೆಲಸವನ್ನು ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.