ಕರ್ನಾಟಕ

karnataka

ETV Bharat / state

Mysuru ದಸರಾ: ಅರಮನೆಗೆ ಆಗಮಿಸಿದ 8 ಆನೆಗಳ ತೂಕವೆಷ್ಟು?; ಹೀಗಿತ್ತು ಇಂದಿನ ಗಜಪಯಣ - mysore dasara 2021

ನಾಡಹಬ್ಬ ದಸರಾವನ್ನು ಕೋವಿಡ್ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಸರಳ ಹಾಗೂ ಸಾಂಪ್ರದಾಯಿಕವಾಗಿ ಆಚರಿಸಲು ನಿರ್ಧರಿಸಲಾಗಿದೆ. ಈ ಹಿನ್ನೆಲೆಯಲ್ಲಿ ವಿವಿಧ ಶಿಬಿರಗಳಿಂದ ಅಂಬಾರಿಯ ನಾಯಕ ಅಭಿಮನ್ಯು ನೇತೃತ್ವದಲ್ಲಿ ಆಯ್ಕೆ ಮಾಡಲಾಗಿದ್ದ 8 ಆನೆಗಳನ್ನು ಅರಮನೆಗೆ ಸ್ವಾಗತಿಸುವ ಮುನ್ನ, ಅವುಗಳ ತೂಕ ಪರೀಕ್ಷೆ ಮಾಡಲಾಗಿದೆ.

details-about-mysore-dasara-elephants-weight
Mysuru Dasara: ಅರಮನೆಗೆ ಆಗಮಿಸಿದ 8 ಆನೆಗಳ ತೂಕವೆಷ್ಟು? ಇಲ್ಲಿದೆ ಇಂದು ನಡೆದ ಆಚರಣೆಗಳ ಡಿಟೇಲ್ಸ್​​

By

Published : Sep 16, 2021, 1:43 PM IST

Updated : Sep 16, 2021, 2:20 PM IST

ಮೈಸೂರು:ದಸರಾ - 2021 ಮಹೋತ್ಸವಕ್ಕೆ ಅಭಿಮನ್ಯು ನೇತೃತ್ವದ ಗಜಪಡೆ ಗಜಪಯಣದ ಮೂಲಕ ಇಂದು ಬೆಳಗ್ಗೆ ಅರಮನೆಗೆ ಸಾಂಪ್ರದಾಯಿಕವಾಗಿ ಪೂಜೆ ಸಲ್ಲಿಸುವ ಮೂಲಕ ಬರಮಾಡಿಕೊಳ್ಳಲಾಯಿತು. ಇದಕ್ಕೂ ಮುನ್ನ ಗಜಪಯಣ, ಸಾಂಪ್ರದಾಯಿಕ ಕಾರ್ಯಕ್ರಮ ವೀರನಹೊಸಹಳ್ಳಿಯಲ್ಲಿ ನೆರವೇರಿತು.

ಈ ಬಾರಿ ನಾಡಹಬ್ಬ ದಸರಾವನ್ನು ಕೋವಿಡ್ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಸರಳ ಹಾಗೂ ಸಾಂಪ್ರದಾಯಿಕವಾಗಿ ಆಚರಿಸಲು ನಿರ್ಧರಿಸಲಾಗಿದೆ. ಈ ಹಿನ್ನೆಲೆಯಲ್ಲಿ ವಿವಿಧ ಶಿಬಿರಗಳಿಂದ ಅಂಬಾರಿಯ ನಾಯಕ ಅಭಿಮನ್ಯು ನೇತೃತ್ವದಲ್ಲಿ ಆಯ್ಕೆ ಮಾಡಲಾಗಿದ್ದ 8 ಆನೆಗಳನ್ನು ಅರಮನೆಗೆ ಸ್ವಾಗತಿಸುವ ಮುನ್ನ, ಅವುಗಳ ತೂಕ ಪರೀಕ್ಷೆ ಮಾಡಲಾಗಿದೆ. ಅರಮನೆ ಆವರಣದಲ್ಲಿ ಒಂದು ತಿಂಗಳ ಕಾಲ ಪೌಷ್ಟಿಕ ಆಹಾರಗಳನ್ನು ನೀಡಿ ತಾಲೀಮು ನಡೆಸಲಾಗುವುದು.

ಗಜಪಡೆ ಆಗಮನ

ಸಾಂಪ್ರದಾಯಿಕ ಗಜಪಯಣಕ್ಕೆ ಚಾಲನೆ:

ನಾಡಹಬ್ಬ ದಸರಾದ ಪ್ರಮುಖ ಆಕರ್ಷಣೆ ಜಂಬೂ ಸವಾರಿಯಲ್ಲಿ ಪಾಲ್ಗೊಳ್ಳಲು ಕಾಡಿನಿಂದ ನಾಡಿಗೆ ಆಗಮಿಸಲಿದ್ದ ಗಜಪಡೆಗೆ ಸೆ. 13ರ ಬೆಳಗ್ಗೆ 09.30ರಿಂದ 10.20ರೊಳಗೆ ಸಲ್ಲುವ ತುಲಾ ಲಗ್ನದಲ್ಲಿ ಕಾಡಿನ ಬಾಗಿಲಿನಲ್ಲಿ ಆನೆಗಳನ್ನು ನಿಲ್ಲಿಸಿ, ಆನೆಯ ಪಾದಗಳನ್ನು ತೊಳೆದು, ಪಾದಕ್ಕೆ ಅರಿಶಿಣ, ಕುಂಕುಮ‌, ಅಕ್ಷತೆ, ಗಂಧಪತ್ರಗಳನ್ನು ಹಚ್ಚಿ, ವಿಶೇಷ ಪೂಜೆ ಮಾಡಿ, ನಾನಾ ವಿಧದ ಭಕ್ಷ್ಯಗಳು, ಪಂಚ ಫಲಗಳನ್ನು ಇಟ್ಟು ನೈವೇದ್ಯ ಮಾಡಿ ಚಾಮರ ಬೀಸಿ, ಪುಷ್ಪಾರ್ಚನೆ ಮಾಡಿ ವಿಶೇಷ ಪೂಜೆ ಸಲ್ಲಿಸಲಾಗಿತ್ತು.

Mysuru ದಸರಾ: ಹೀಗಿತ್ತು ಇಂದಿನ ಗಜಪಯಣ

ನಂತರ ಸ್ಥಳೀಯ ಜನಪ್ರತಿನಿಧಿಗಳು, ಸಂಸದರು, ಅಧಿಕಾರಿಗಳು ಗಜಪಯಣಕ್ಕೆ ಚಾಲನೆ ನೀಡಿ, ಮಾವುತರು, ಕಾವಾಡಿಗಳು ಹಾಗೂ ಇತರ ಸಿಬ್ಬಂದಿಗೆ ನಾಡಹಬ್ಬ ದಸರಾಗೆ ಭಾಗವಹಿಸಲು ತಾಂಬೂಲ ನೀಡಿ ಆಹ್ವಾನಿಸಿದರು.

ಅರಣ್ಯ ಭವನದಲ್ಲಿ ವಾಸ್ತವ್ಯ:

ಗಜಪಯಣದ ಮೂಲಕ ಮೈಸೂರು ಪುರ ಪ್ರವೇಶಿಸಿದ ಅಭಿಮನ್ಯು ನೇತೃತ್ವದ ಗಜಪಡೆ ಅರಣ್ಯಭವನದಲ್ಲಿ ಮೂರು ದಿನಗಳ ಕಾಲ ವಾಸ್ತವ್ಯ ಹೂಡಿತ್ತು. 8 ಆನೆಗಳ ಜೊತೆಗೆ ಮಾವುತರು ಹಾಗೂ ಕಾವಾಡಿಗಳು ಹಾಗೂ ಇತರ ಕೆಲಸ ನಿರ್ವಹಿಸಲು ಸಿಬ್ಬಂದಿ ಸೇರಿದಂತೆ 50 ಮಂದಿ ಆಗಮಿಸಿದ್ದಾರೆ.

ಗಜಪಡೆಗೆ ಸ್ವಾಗತ

ಯಾವ ಶಿಬಿರದಿಂದ ಯಾವ ಆನೆ ಹಾಗೂ ಅವುಗಳ ತೂಕದ ವಿವರ:

ಮತ್ತಿಗೋಡು ಶಿಬಿರ:

52 ವರ್ಷದ ಅಭಿಮನ್ಯು, ತೂಕ - 4,720 ಕೆಜಿ

38 ವರ್ಷದ ಗೋಪಾಲಸ್ವಾಮಿ, ತೂಕ - 4,420 ಕೆಜಿ

ದೊಡ್ಡ ಹರವೆ ಶಿಬಿರ:

34 ವರ್ಷದ ಅಶ್ವತ್ಥಾಮ, ತೂಕ - 3,620 ಕೆಜಿ

ದುಬಾರೆ ಶಿಬಿರ:

58 ವರ್ಷದ ವಿಕ್ರಮ, ತೂಕ - 3,820 ಕೆಜಿ

42 ವರ್ಷದ ಧನಂಜಯ, ತೂಕ - 4,050 ಕೆಜಿ

44 ವರ್ಷದ ಹೆಣ್ಣಾನೆ ಕಾವೇರಿ, ತೂಕ - 3,220 ಕೆಜಿ

ರಾಮಪುರ ಶಿಬಿರ:

48 ವರ್ಷದ ಹೆಣ್ಣಾನೆ ಚೈತ್ರಾ, ತೂಕ - 2,600 ಕೆಜಿ

20 ವರ್ಷದ ಹೆಣ್ಣಾನೆ ಲಕ್ಷ್ಮಿ, ತೂಕ - 2,540 ಕೆಜಿ

ಗಜಪಡೆಗೆ ಅರಣ್ಯಭವನದಿಂದ ಬೀಳ್ಕೊಡುಗೆ:

ಗಜಪಯಣದ ಮೂಲಕ ಮೈಸೂರು ಪುರ ಪ್ರವೇಶಿಸಿ, ಅರಣ್ಯಭವನದಲ್ಲಿ ವಾಸ್ತವ್ಯ ಹೂಡಿದ್ದ ಅಭಿಮನ್ಯು ನೇತೃತ್ವದ ಗಜಪಡೆಗೆ ಅರಣ್ಯ ಇಲಾಖೆಯಿಂದ ಇಂದು ಪೂಜೆ ಸಲ್ಲಿಸಿ ಅರಮನೆಗೆ ಬೀಳ್ಕೊಡಲಾಯಿತು. ಇಂದು ಬೆಳಗ್ಗೆ 5.15ರಿಂದ 5.45ರೊಳಗೆ ಸಲ್ಲುವ ಬ್ರಾಹ್ಮಿ ಮುಹೂರ್ತದಲ್ಲಿ ಗಜಪಡೆಗೆ ಮೊದಲ ಪೂಜೆ ಸಲ್ಲಿಸಿ, ಆನೆಗಳನ್ನು ನಿಲ್ಲಿಸಿ ಕಾಲು ತೊಳೆದು, ಕಾಲಿಗೆ ಅರಿಸಿಣ, ಕುಂಕುಮ, ಗಂಧ ಪತ್ರ ನಾನಾ ರೀತಿಯ ಪುಷ್ಪಗಳನ್ನಿಟ್ಟು ಪೂಜೆ ನಡೆಸಿ, ಗಣಪತಿಗೆ ಇಷ್ಟವಾದಂತಹ ಪಂಚಕಜ್ಜಾಯ, ಪಂಚ ಭಕ್ಷ್ಯಗಳನ್ನಿಟ್ಟು ನೈವೇದ್ಯ ಇಟ್ಟು ಪೂಜೆ ನಡೆಯಿತು.

7.35ಕ್ಕೆ ಅರಣ್ಯಭವನದಿಂದ ಕಾಲ್ನಡಿಗೆ ಮೂಲಕ ಹೊರಟ ಅಭಿಮನ್ಯು ನೇತೃತ್ವದ ಗಜಪಡೆಯು ಅಶೋಕಪುರಂ ರಸ್ತೆ ಮೂಲಕ ಬಲ್ಲಾಳ್ ವೃತ್ತ, ಜೆಎಲ್​ಬಿ ರಸ್ತೆ, ರಾಮಸ್ವಾಮಿ ವೃತ್ತ, ಚಾಮರಾಜ ಜೋಡಿ ರಸ್ತೆ, ಗನ್ ಹೌಸ್, ಬಿ.ಎನ್. ರಸ್ತೆ ಮೂಲಕ ಅರಮನೆ ಜಯ ಮಾರ್ತಾಂಡ ದ್ವಾರವನ್ನು ಬೆಳಗ್ಗೆ 8.30ರೊಳಗ ತಲುಪಿತು.

ಅರಮನೆ ಪ್ರವೇಶಿಸಿದ ಗಜಪಡೆ:

ಅಭಿಮನ್ಯು ನೇತೃತ್ವದ ಗಜಪಡೆಯು ಶುಭ ತುಲಾ ಲಗ್ನದಲ್ಲಿ ಅರಮನೆಯ ಜಯ ಮಾರ್ತಾಂಡ ಗೇಟ್ ಮೂಲಕ ಅರಮನೆ ಪ್ರವೇಶಿಸಿತು. ಬೆಳಗ್ಗೆ 8.36ರಿಂದ 9.11ರ ನಡುವಿನ ಶುಭಾ ತುಲಾ ಲಗ್ನದಲ್ಲಿ ಜಯಮಾರ್ತಾಂಡ ದ್ವಾರದ ಬಳಿ ಜಿಲ್ಲಾ ಉಸ್ತುವಾರಿ ಸಚಿವರಾದ‌ ಎಸ್.ಟಿ.ಸೋಮಶೇಖರ್ ಹಾಗೂ ಅರಣ್ಯಾಧಿಕಾರಿಗಳು ಪೂಜೆ ಸಲ್ಲಿಸಿ ಅರಮನೆ ಆವರಣದೊಳಗೆ ಬರ ಮಾಡಿಕೊಂಡರು.

ಅರಮನೆ ಪ್ರವೇಶಿಸಿದ ಬಳಿಕ ಗಜಪಡೆಗೆ ಮಜ್ಜನ:

ಅರಣ್ಯಭವನದಿಂದ ಕಾಲ್ನಡಿಗೆಯಲ್ಲಿ ಅರಮನೆ ಪ್ರವೇಶಿದ ಗಜಪಡೆಗೆ ಅರಮನೆ ಆವರಣದ ಆನೆ ಶಿಬಿರದ ತೊಟ್ಟಿಯಲ್ಲಿ ಮಜ್ಜನ ಮಾಡಿಸಲಾಯಿತು. ಆನೆಗಳ ಮಾವುತರು ಹಾಗೂ ಕಾವಾಡಿಗಳು ಆನೆಗಳಿಗೆ ಮಜ್ಜನ ಮಾಡಿಸಿದರು‌. ಇದರಿಂದ ಕೊಂಚ ದಣಿದಿದ್ದ ಆನೆಗಳು ರಿಲ್ಯಾಕ್ಸ್ ಮೂಡ್ ನಲ್ಲಿ ಅರಮನೆಯ ಶಿಬಿರಕ್ಕೆ ತೆರಳಿದವು.‌

ಅರಮನೆ ಆವರಣದಲ್ಲಿ ವಾಸ್ತವ್ಯ:

ಸೆ. 16ರಿಂದ ಅಕ್ಟೋಬರ್ 17ರವರೆಗೆ ಅರಮನೆಯಲ್ಲಿ ವಾಸ್ತವ್ಯ ಹೂಡಲಿರುವ ಅಭಿಮನ್ಯು ನೇತೃತ್ವದ ಗಜಪಡೆಯು ಸೆ. 19ರಿಂದ ಅರಮನೆ ಆವರಣದಲ್ಲಿ ತಾಲೀಮು ನಡೆಸಲಿದೆ. ಆನೆಗಳು ಅಕ್ಟೋಬರ್ 15ರಂದು ಜಂಬೂ ಸವಾರಿಯಲ್ಲಿ ಭಾಗವಹಿಸಿ, ಅಕ್ಟೋಬರ್ 17ರಂದು ಮರಳಿ ತಮ್ಮ ತಮ್ಮ ಶಿಬಿರಗಳಿಗೆ ವಾಪಸ್​ ಆಗಲಿವೆ.

ಇದನ್ನೂ ಓದಿ:ರಾಜ್ಯದ ಇತಿಹಾಸದಲ್ಲೇ ಇದೇ ಮೊದಲು: ಬೆಂಗಳೂರಿನಲ್ಲಿ ಡ್ರಗ್ಸ್ ಫ್ಯಾಕ್ಟರಿ 'ಛೇದಿ'ಸಿದ ಪೊಲೀಸರು

Last Updated : Sep 16, 2021, 2:20 PM IST

ABOUT THE AUTHOR

...view details