ಮೈಸೂರು :ಕೆ.ಆರ್. ಆಸ್ಪತ್ರೆ, ಬಾಲಮಂದಿರದ ಅಧಿಕಾರಿಗಳು ಮತ್ತು ಸಿಬ್ಬಂದಿಯ ವಿರುದ್ದ ಉಪ ಲೋಕಾಯುಕ್ತ ಘಣೀಂದ್ರ ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡು, ಶಿಸ್ತು ಕ್ರಮ ಕೈಗೊಳ್ಳುವಂತೆ ಲೋಕಾಯುಕ್ತ ಎಸ್ಪಿಗೆ ಸೂಚಿಸಿದ್ದಾರೆ. ಸರಿಯಾದ ರೀತಿಯಲ್ಲಿ ಕಾರ್ಯನಿರ್ವಹಿಸದಿರುವ ಹಾಗೂ ಇನ್ನಿತರ ಪ್ರಮುಖ ಸಮಸ್ಯೆಗಳನ್ನು ಅರಿತು ಕರ್ತವ್ಯಲೋಪವನ್ನು ಗಮನಿಸಿದ ಹಿನ್ನೆಲೆಯಲ್ಲಿ 12 ಮಂದಿ ಅಧಿಕಾರಿಗಳ ಮೇಲೆ ಸೂಕ್ತ ಕ್ರಮ ಜರುಗಿಸಲು ನಿರ್ಧರಿಸಲಾಗಿದೆ.
ನಗರದ ಕೆ.ಆರ್. ಆಸ್ಪತ್ರೆಗೆ ಉಪ ಲೋಕಾಯುಕ್ತ ಕೆ.ಎಂ. ಘಣೀಂದ್ರ ಭೇಟಿ ನೀಡಿದ ಸಂದರ್ಭದಲ್ಲಿ ಆಸ್ಪತ್ರೆ ನಿರ್ವಹಣೆಯಲ್ಲಿ ಹಲವು ಲೋಪಗಳು ಕಂಡುಬಂದಿದ್ದವು. ರೋಗಿಗಳೂ ಸಹ ತಮಗಾಗುತ್ತಿರುವ ತೊಂದರೆಗಳ ಬಗ್ಗೆ ಅಳಲು ತೋಡಿಕೊಂಡಿದ್ದರು. ಈ ಸಂಬಂಧ ಕುಟುಂಬ ಕಲ್ಯಾಣಾಧಿಕಾರಿ ಡಾ.ಕೆ. ಎಚ್.ಪ್ರಸಾದ್, ಆಸ್ಪತ್ರೆಯ ಸೂಪರಿಂಟೆಂಡೆಂಟ್ ನಂಜುಂಡಸ್ವಾಮಿ, ವೈದ್ಯಾಧಿಕಾರಿ ರಾಜೇಂದ್ರ ಕುಮಾರ್ ಸೇರಿದಂತೆ ಹನ್ನೆರಡು ಮಂದಿ ಅಧಿಕಾರಿಗಳ ವಿರುದ್ಧ ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡು ತನಿಖೆ ಕೈಗೊಳ್ಳುವಂತೆ ಲೋಕಾಯುಕ್ತ ಎಸ್ಪಿಗೆ ಅವರು ಸೂಚನೆ ನೀಡಿದ್ದಾರೆ.
ಘಟನೆಯ ಹಿನ್ನೆಲೆ ಹೀಗಿದೆ..: ಉಪ ಲೋಕಾಯುಕ್ತರು ಜೂನ್ 17ರಿಂದ 19 ರವರೆಗೆ ಮೈಸೂರು ಪ್ರವಾಸದಲ್ಲಿದ್ದ ವೇಳೆ ಕೆ.ಆರ್. ಆಸ್ಪತ್ರೆಗೆ ಭೇಟಿ ನೀಡಿದ್ದರು. ಆ ಸಂದರ್ಭದಲ್ಲಿ ಆಸ್ಪತ್ರೆಯಲ್ಲಿ ಎಲ್ಲೆಂದರಲ್ಲಿ ಕಸ ಬಿಸಾಡಿರುವುದು, ಸ್ವಚ್ಚತಾ ನಿರ್ವಹಣೆ ಇಲ್ಲದೇ ಇರುವುದು, ರೋಗಿಗಳಿಗೆ ಸರಿಯಾದ ಚಿಕಿತ್ಸೆ ನೀಡದಿರುವುದು, ಸರಿಯಾದ ರೀತಿಯಲ್ಲಿ ಶೌಚಾಲಯಗಳ ನಿರ್ವಹಣೆ ಮಾಡದೇ ಇರುವುದು. ರೋಗಿಗಳಿಗೆ ಹೊರಗಿನಿಂದ ಔಷಧಿ ತರಲು ಹೇಳುತ್ತಾರೆ ಎಂದು ರೋಗಿಗಳು ಉಪ ಲೋಕಾಯುಕ್ತರ ಬಳಿ ದೂರಿದ್ದರು ಎಂದು ಉಪ ಲೋಕಾಯುಕ್ತರು ತಮ್ಮ ಆದೇಶದಲ್ಲಿ ಉಲ್ಲೇಖಿಸಿದ್ದರು.
ಆಸ್ಪತ್ರೆ ಸಿಬ್ಬಂದಿಯಿಂದ ಲಂಚಕ್ಕೆ ಬೇಡಿಕೆ ಆರೋಪ: ಕೆ.ಆರ್. ಆಸ್ಪತ್ರೆಗೆ ಮೈಸೂರು ಜಿಲ್ಲೆಯ ಸುತ್ತಮುತ್ತಲಿನಿಂದ ಹಲವು ರೋಗಿಗಳು ಬರುತ್ತಾರೆ. ಸರಕಾರಿ ಆಸ್ಪತ್ರೆ, ಉತ್ತಮ ಗುಣಮಟ್ಟದ ಚಿಕಿತ್ಸೆ ಸಿಗಬೇಕು. ರೋಗಿಗಳಿಗೆ ಇಲ್ಲಿ ಎಲ್ಲ ರೀತಿಯ ಅನುಕೂಲತೆಗಳಿವೆ. ಆದರೆ ಆಸ್ಪತ್ರೆಯ ಕೆಲವು ಸಿಬ್ಬಂದಿ ಚಿಕಿತ್ಸೆ ನೀಡಲು ಹಾಗೂ ಇನ್ನಿತರ ಕಾರಣಗಳಿಗೆ ಬರುವ ರೋಗಿಗಳಿಂದ ಲಂಚಕ್ಕೆ ಬೇಡಿಕೆ ಇಡುತ್ತಾರೆ ಎಂದು ರೋಗಿಗಳು ತಮಗೆ ದೂರು ನೀಡಿದ್ದಾರೆ ಎಂದು ಉಪ ಲೋಕಾಯುಕ್ತರು ತಿಳಿಸಿದ್ದರು.